Index   ವಚನ - 338    Search  
 
ಹುಟ್ಟಿಸುವ ಹೊಂದಿಸುವ ಶಿವನ ನಿಷ್ಠೆಯಿಲ್ಲದ ಸಾಹಿತ್ಯವ ಕೊಂಡು, ಕ್ರೀಯಿಲ್ಲದಿರ್ದಡೆ ಭಕ್ತರೆಂತೆಂಬೆನಯ್ಯ? ಅಟ್ಟ ಕೂಳೆಲ್ಲವಂ ಅನ್ಯದೈವದ ಹೆಸರ ಹೇಳಿ ಭುಂಜಿಸುವ ಚೆಟ್ಟಿ ಮಾಳ ಅಕ್ಕತದಿಗಿಯೆಂದು ತಮ್ಮ ಗೋತ್ರಕ್ಕೆ ಬೊಟ್ಟನಿಡುವರು. ಮುಖ್ಯರಾಗಬೇಕೆಂದು ಅಟ್ಟ ಅಡಿಗೆ ಮೀಸಲವೆಂದು ಅಶುದ್ಧವ ತಿಂಬ ಕಾಗೆಗೆ ಕೂಳ ಚೆಲ್ಲಿ, ತಮ್ಮ ಪಿತರುಂಡರೆಂದು ಮಿಕ್ಕ ಕೂಳ ತಮ್ಮ ಲಿಂಗಕ್ಕೆ ತೋರಿ ಭುಂಜಿಸುವ ಭಕ್ತರೆನಿಸಿಕೊಂಬ ಭ್ರಷ್ಟಜಾತಿಗಳು ಕೆಟ್ಟಕೇಡಿಂಗೆ ಕಡೆಯಿಲ್ಲವೆಂದ, ನಮ್ಮ ಕಲಿದೇವರದೇವ.