Index   ವಚನ - 343    Search  
 
ಹೊನ್ನು ಹೆಣ್ಣು ಮಣ್ಣನಾವರಿಸಿಕೊಂಡು, ಒಡವೆ ಆಭರಣಂಗಳ ಹಲ್ಲಣಿಸಿಕೊಂಡು ಬಂದು, ಸರ್ವರಿಗೆ ಶಾಸ್ತ್ರೋಪದೇಶವ ಹೇಳುವರು ವೇಷಧಾರಿಗಳು. ಸೂಳೆಯರಂತೆ ತಮ್ಮ ಉಪಾಧಿಕೆಗೆ ಒಡಲಾಸೆಗೆ ಹಿತವಚನ ನುಡಿವರು. ಇಂತಪ್ಪ ಪ್ರಪಂಚಿನ ವೇಷಡಂಭಕ ಧೂರ್ತಲಾಂಛನಧಾರಿಗಳಿಗೆ ಮಹಂತಿನ ದೇವರೆನ್ನಬಹುದೆ? ಎನಲಾಗದು. ಅದೇನು ಕಾರಣವೆಂದಡೆ, ತಮ್ಮಾದಿಯ ನಿಲುವ ತಾವರಿಯರು. ಷಟ್‍ಸ್ಥಲದ ನಿರ್ಣಯವ ಏನೆಂದರಿಯರು. ಆಚಾರದನುಭಾವದಂತರಂಗದ ಮೂಲವ ಮುನ್ನವೇ ಅರಿಯರು. ಇಂತಿದನರಿಯದ ಪಶುಪ್ರಾಣಿಗಳಿಗೆ ಜಂಗಮವೆನ್ನಬಹುದೆ? ಎನ್ನಲಾಗದಯ್ಯಾ, ಕಲಿದೇವರದೇವ.