Index   ವಚನ - 342    Search  
 
ಹೊಗಬಾರದು ಕಲ್ಯಾಣವನಾರಿಗೆಯೂ ಹೊಕ್ಕಡೇನು? ಕಲ್ಯಾಣದ ಸ್ಥಾನಮಾನಂಗಳ ನುಡಿಯಬಾರದು. ಈ ಕಲ್ಯಾಣದ ಕಡೆಯ ಕಾಣಬಾರದು. ಕಲ್ಯಾಣದೊಳಗೆ ಹೊಕ್ಕೆಹೆವೆಂದು ಕಲ್ಯಾಣ ಚರಿತ್ರರಾದೆಹೆವೆಂದು ದೇವ ದಾನವ ಮಾನವರೆಲ್ಲರೂ ಭಾವಿಸುತ್ತಿರ್ದುರು ನೋಡಯ್ಯಾ ಕಲ್ಯಾಣವನು. ಅನಂತಮೂರ್ತಿಗಳು ಅನಂತ ಸ್ಥೂಲಮೂರ್ತಿಗಳು ಅನಂತ ಸೂಕ್ಷ್ಮಮೂರ್ತಿಗಳು ಅನಂತ ಮಂತ್ರಧ್ಯಾನರೂಪರು ಪುಣ್ಯಕ್ಕೆ ಅಭಿಲಾಷೆಯ ಮಾಡುವವರು ಪೂಜಕರು ಯೋಗಿಗಳು ಭೋಗಿಗಳು ದ್ವೈತರು ಅದ್ವೈತರು ಕಾಮಿಗಳು ನಿಷ್ಕರ್ಮಿಗಳು ಆಶ್ರಿತರು ಅದೆಂತು ಹೊಗಬಹುದಯ್ಯಾ ಕಲ್ಯಾಣವನು? ಲಿಂಗದೃಷ್ಟಂಗಲ್ಲದೆ ಲಿಂಗವೇದ್ಯಂಗಲ್ಲದೆ ಲಿಂಗಗಂಭೀರಂಗಲ್ಲದೆ ಪ್ರಸಾದ ಕುಳಾನ್ವಯಂಗಲ್ಲದೆ ಆಸೆಗೆಡೆಗುಡದಿಪ್ಪುದೆ ಕಲ್ಯಾಣ. ಸರ್ವಾಂಗ ವರ್ಣವಳಿದು ಕುಲಮದ ತಲೆದೋರದೆ ಭಕ್ತಿ ನಿತ್ಯವಾದುದೆ ಕಲ್ಯಾಣ. ಈ ಕಲ್ಯಾಣವೆಂಬ ಮಹಾಪುರದೊಳಗೆ ಬಸವಣ್ಣನೂ ನಾನೂ ಕೂಡಿ ಹದುಲಿರ್ದೆವು ಕಾಣಾ, ಕಲಿದೇವಯ್ಯ.