Index   ವಚನ - 1    Search  
 
ಅಖಂಡ ಪರಿಪೂರ್ಣ ನಿತ್ಯನಿರಂಜನ ನಿರವಯ ಲಿಂಗದೊಳು ಸಮರಸೈಕ್ಯವನೈದಿ, ಘನಕ್ಕೆ ಘನ ವೇದ್ಯವಾದ ಬಳಿಕ ಅರಿವೆಂಬುದಿಲ್ಲ, ಮರೆವೆಂಬುದಿಲ್ಲ, ಕೂಡಿದೆನೆಂಬುದಿಲ್ಲ, ಅಗಲಿದೆನೆಂಬುದಿಲ್ಲ, ಕಾಣೆನೆಂಬುದಿಲ್ಲ, ಕಂಡೆನೆಂಬುದಿಲ್ಲ, ಸಂಗ ನಿಸ್ಸಂಗವೆಂಬುದಿಲ್ಲ, ಶೂನ್ಯ ನಿಶ್ಯೂನ್ಯವೆಂಬ ಭಾವದ ಭ್ರಮೆ ಮುನ್ನಿಲ್ಲ. ಇಂತಿವೇನುವೇನುವಿಲ್ಲದೆ ಶಬ್ದಮುಗ್ಧನಾಗಿ, ಭ್ರಮರದೊಳಡಗಿದ ಕೀಟದಂತೆ ಉರಿಯೊಳಡಗಿದ ಕರ್ಪುರದಂತೆ ಕ್ಷೀರದೊಳು ಬೆರೆದ ಪಯದಂತೆ, ಅಂಬುಧಿಯೊಳಡಗಿದ ವಾರಿಕಲ್ಲಿನಂತೆ ನಾ ನೀ ಎಂಬೆರಡಳಿದು, ತಾನೆ ತಾನಾದ ಸುಖವ ಮಹಾಜ್ಞಾನಿಗಳು ಬಲ್ಲರಲ್ಲದೆ ಅಜ್ಞಾನಿಗಳೆತ್ತ ಬಲ್ಲರಯ್ಯಾ, ಪರಮಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನಯ್ಯಾ.?