Index   ವಚನ - 22    Search  
 
ಮಹಾಲಿಂಗಂ ತ್ರಯೋಲಿಂಗಂ ಷಡ್ವಿಧಂ ಚ ತಯೋರ್ಮುಖಂ ತ್ರಿವಿಧ್ರೈಕಮುಖಂಲಿಂಗಂ ಮಹಾಲಿಂಗಂತು ದರ್ಶನಂ|| ಇಂತೆಂದುದಾಗಿ, ಒಂದು ಮೂರಾಗಿ ಮಾಡಿಕೊಂಡನಯ್ಯಾ ನಮ್ಮ ಬಸವಣ್ಣನು. ಆ ಮೂರು ಆರಾಗಿ ಮಾಡಿಕೊಂಡನಯ್ಯಾ ನಮ್ಮ ಬಸವಣ್ಣನು. ಆ ಆರು ಮೂವತ್ತಾರಾಗಿ ಮಾಡಿಕೊಂಡನಯ್ಯಾ ನಮ್ಮ ಬಸವಣ್ಣನು. ಇಂತಪ್ಪ ಸರ್ವಸಂಗಪರಿತ್ಯಾಗಿಯಯ್ಯಾ ನಮ್ಮ ಬಸವಣ್ಣನು. ಇಂತಪ್ಪ ಸರ್ವಾವಧಾನಿಯಯ್ಯಾ ನಮ್ಮ ಬಸವಣ್ಣನು. ಇಂತಪ್ಪ ಸರ್ವಾಂಗಲಿಂಗಿಯಯ್ಯಾ ನಮ್ಮ ಬಸವಣ್ಣನು. ಇಂತಪ್ಪ ಸರ್ವಕಾರಣಯುತನಯ್ಯಾ ನಮ್ಮ ಬಸವಣ್ಣನು. ಇಂತಪ್ಪ ಸರ್ವನಿರ್ವಾಣಿಯಯ್ಯಾ ನಮ್ಮ ಬಸವಣ್ಣನು. ಇಂತಪ್ಪ ಬಸವಣ್ಣನ ಮಹಾಮಹಿಮೆಯನು ನೀವೆ ಬಲ್ಲಿರಿ. ಅಸಂಖ್ಯಾತ ಪುರಾತರು ಪ್ರಭುದೇವರು ಮುಖ್ಯವಾದ ಮಹಾಮಹಿಮರ ನಿಲುವಿನ ಶ್ರೀಚರಣಕ್ಕೆ ನಾನು ಶರಣಾರ್ಥಿ ಶರಣಾರ್ಥಿ ಎಂದೆನುತ್ತ ಶಬ್ದಮುಗ್ಧ ಮೂಗನಾದೆ. ಉರಿಯುಂಡ ಕರ್ಪುರದಂತೆ, ನಿಮ್ಮ ಶ್ರೀಚರಣವ ನಾನೆಯ್ದೆನಯ್ಯಾ. ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣ ಬಸವಣ್ಣನ ಕರುಣ ಪ್ರಸಾದವ ಕೊಂಡು ನಾನು ಬಸವಣ್ಣನ ಮುಂದೆ ಬಯಲಾಗಿ ಹೋದೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.