Index   ವಚನ - 21    Search  
 
ಭಕ್ತಿಯ ಕುಳವನು ಬಸವಣ್ಣನೇ ಬಲ್ಲನು. ಪ್ರಸಾದದ ನೆಲೆಯನು ಬಸವಣ್ಣನೇ ಬಲ್ಲನು. ಬಸವಣ್ಣ ನಡೆದುದೇ ಮಾರ್ಗ, ಅಖಿಳಗಣಂಗಳಿಗೆ, ಬಸವಣ್ಣ ನುಡಿದುದೇ ವೇದ, ಮಹಾಪುರುಷರಿಗೆ, ಬಸವಣ್ಣನನಾದಿ, ಲಿಂಗವಾದಿ ಎಂದರಿದೆನಾಗಿ, ಬಸವಣ್ಣನ ನೆನೆವುತಿರ್ದೆನಯ್ಯಾ. ಬಸವಣ್ಣನ ಪಾದವಿಡಿದೆನಾಗಿ, ಲಿಂಗವೇದಿಯಾದೆನು. ಬಸವಣ್ಣನ ಬಾಗಿಲ ಕಾಯ್ದೆನಾಗಿ, ಪ್ರಸಾದ ಸಾಧ್ಯವಾಯಿತ್ತು. ಬಸವಣ್ಣನ ಕರುಣದಿಂದ ಪ್ರಭುದೇವರ ನಿಲವ ಕಂಡೆನು. ಬಸವಣ್ಣನ ಬೋಧೆಯಿಂದ ಜಂಗಮವೇ ಲಿಂಗವೆಂದರಿದೆನು. ಆ ಜಂಗಮ ಮುಖದಿಂದಲ್ಲದೆ ಲಿಂಗತೃಪ್ತಿಯಾಗದು. ಪ್ರಸಾದಸಿದ್ಧಿಯಾದಲ್ಲದೆ ಭವಂ ನಾಸ್ತಿಯಾಗದು. ಇದು ಕಾರಣ,ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ, ನಿಮ್ಮ ಶರಣ ಬಸವಣ್ಣನ ನಂಬಿ, ನಾನು ಕೆಟ್ಟು, ಬಟ್ಟಬಯಲಾಗಿ ಹೋದೆನೆಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.