Index   ವಚನ - 5    Search  
 
ತತ್ವವಿದ್ಯೆಯೆಂದು ಮಿಕ್ಕಾದವರಿಗೆ ಹೇಳುವಾಗ, ವಸ್ತುವಿದ್ಯೆಯೆಂದು ಮಿಕ್ಕಾದವರಿಗೆ ಹೇಳುವಾಗ ಆ ತತ್ವವೂ ಆ ವಸ್ತುವೂ ತನ್ನ ಕತ್ತಲು ಕೂಸೆ ? ತಾ ಸತ್ತೆನೆಂದು ಹೇಳುವಾಗ, ಆ ಗುಣ ಚೇತನವೋ? ಅಚೇತನವೋ ? ಮದೋನ್ಮತ್ತಂಗೆ, ಸರ್ಪದಷ್ಟಂಗೆ, ದುರ್ಗ್ರಹವೇದಿತಂಗೆ, ತ್ರಿವಿಧಮಲಲೋಲುಪ್ತಮತ್ತಂಗೆ ಮತ್ತೆ ತನ್ನ ಕೊರತೆಯನರಿಯದ ದುಶ್ಚರಿತ ಕುಹಕಿ ಕ್ಷುದ್ರಂಗೆ, ಮತ್ತೆ ನಿಜವಸ್ತುವಲ್ಲಿ ಹೊತ್ತು ನಿತ್ತರಿಸಿಪ್ಪನೆ ? ನಿಜನಿಃಕಲರಲ್ಲಿ, ನಿರ್ದೇಹಿಗಳಲ್ಲಿ, ನಿರಾಲಂಬರಲ್ಲಿ, ಸರ್ವಕ್ರೀ ಸಂಪೂರ್ಣರಲ್ಲಿ, ಅಕುಟಿಲರಲ್ಲಿ[ಇಪ್ಪುದು] ಇಂತೀ ಉಭಯದಿರವ ತಿಳಿದು ಮಾಡುವ ಭಕ್ತಂಗೆ ಗುರುವಿನ ಇರವು, ಚರದ ಲಕ್ಷಣ. ಲಿಂಗದ ಪರೀಕ್ಷೆಯಿಂದ ತ್ರಿವಿಧದ ಬಿಡುಗಡೆಯ ಒಳಗೆ ಹಿಡಿವ, ಬಿಡುಮುಡಿಯಲ್ಲಿ ಕೂಡುವ, ಕೊಂಬ ಎಡೆಗಳಲ್ಲಿ ಅಡಿಗಡಿಗೆ ಒಡಗೂಡಿ ನೋಡುತ್ತಿರಬೇಕು. ವರ್ಮದ ಬಿಡುಗಡೆಯಲ್ಲಿ ಮಾಡುವ ಭಕ್ತನ ಕೂಡಿಹ ವಿರಕ್ತನ ತೆರ, ಊರ್ಧ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗವು ತಾನಾದ ಭಕ್ತನ ಯುಕ್ತಿ.