Index   ವಚನ - 36    Search  
 
ಕಂಗಳಲ್ಲಿ ನೋಡಿ ದೃಕ್ಕಿಂಗೆ ಒಳಗಪ್ಪುದದೇನು ಹೇಳಾ. ನಾಸಿಕದಲ್ಲಿ ವಾಸಿಸಿ ಲೇಸಾಯಿತ್ತೆಂಬುದದೇನು ಹೇಳಾ. ಕರ್ಣದಲ್ಲಿ ಕೇಳಿ ಜೊಂಪಿಸಿ ತಲೆದೂಗುವುದು ಅದೇನು ಹೇಳಾ. ಜಿಹ್ವೆಯಲ್ಲಿ ಚಪ್ಪಿರಿದು ಪರಿಭಾವ ಪರಿಪೂರ್ಣವಾಯಿತ್ತೆಂಬುದದೇನು ಹೇಳಾ. ಕೈಯಲ್ಲಿ ಮುಟ್ಟಿ ಮೃದು ಕಠಿನವಾಯಿತ್ತೆಂಬುದದೇನು ಹೇಳಾ. ಇಂತೀ ಗುಣ, ಐದರ ಸೂತಕವೋ ? ತಾನರಿದೆ ಮರದೆನೆಂಬ ಭಾವದ ಸೂತಕವೋ? ಒಂದು ಆತ್ಮನೆಂದಲ್ಲಿ, ಇಂದ್ರಿಯಂಗಳು ಒಂದು ಬಿಟ್ಟು ಒಂದರಿಯವಾಗಿ. ಹಲವೆಡೆ ಉಂಟೆಂದಲ್ಲಿ, ಆತ್ಮನ ಹೊಲಬುದಪ್ಪಿದಲ್ಲಿ, ಆ ಕಳೆಯೆಲ್ಲಿ ಅಡಗಿತ್ತು ಹೇಳಾ ? ಇಂತೀ ರೂಪು ಘಟಭಿನ್ನ ಹಲವು ಚೇತನಂಗಳಲ್ಲಿ ಚೇತನಿಸುವುದು ಅದೇತರ ಗುಣವೆಂದು ಅರಿತಲ್ಲಿ, ಅರಿವು ಸೂತಕ ಭ್ರಾಂತಿ ನಿಂದಲ್ಲಿ, ಕಾಮಧೂಮ ಧೂಳೇಶ್ವರನೆಂಬುದಕ್ಕೆ ಠಾವಾವುದಯ್ಯಾ ?