Index   ವಚನ - 10    Search  
 
ಬಯಲೊಳಗಣ ರೂಪು, ರೂಪಿನೊಳಗಣ ಬಯಲು, ಉಭಯವ ವಿಚಾರಿಸಿ ನೋಡುವಲ್ಲಿ, ಕುಂಭದೊಳಗೆ ನೀರ ತುಂಬಿ, ಸಿಂಧುವಿನೊಳಗೆ ಮುಳುಗಿಸಲಾಗಿ, ಅದರೊಳಗೂ ನೀರು, ಹೊರಗೂ ನೀರು. ಹೊರಗಣ ನೀರು ಒಳಗಾಯಿತ್ತು, ಒಳಗಣ ನೀರು ಹೊರಗಾಯಿತ್ತು. ಕುಂಭದೊಳಗಣ ನೀರಂಗಕ್ಕೆ ಒಳಗೋ ಹೊರಗೋ ಎಂಬುದ ವಿಚಾರಿಸಿ , ತಿಳಿದು,ಅಂಗದ ಮೇಲಿಹ ಲಿಂಗ, ಲಿಂಗವ ಧರಿಸಿಹ ಅಂಗ, ಆ ಅರುಹಿನ ಕುರುಹಿಂಗೆ ಒಳಗೋ ಹೊರಗೋ ಎಂಬುದ ವಿಚಾರಿಸಿ, ಕರ್ಪುರದ ಹೊಗೆಯೊಳಗೆ ಉಭಯ ಬಯಲಾಗಿ, ಮಡಕೆ ಉಳಿಯಿತ್ತದೇಕೆ ? ಘಟ ಉಳಿದು ಆತ್ಮ ಬಯಲಾಯಿತ್ತದೇಕೆ ? ಉಭಯ ನಿರಂತವಾದಲ್ಲಿ, ಉರಿಯಿಂದ ಕರ್ಪುರ ನಷ್ಟ, ಕರ್ಪುರದಿಂದ ಉರಿ ನಷ್ಟವಾದಂತೆ. ಇಂತೀ ಉಭಯಸ್ಥಲದೊಳಗೆ ಅಂಗಲಿಂಗ, ಪ್ರಾಣಲಿಂಗ ಉಭಯವನೊಂದು ಮಾಡಿ ತಿಳಿದು, ನಿಜದಲ್ಲಿ ನಿಂದ ಲಿಂಗಾಂಗಿಯ ಕೂಗಿನ ಕುಲವಿಲ್ಲ, ಮಹಾಮಹಿಮ ಮಾರೇಶ್ವರಾ