ಸ್ವಪ್ನದಲ್ಲಿ ಮರೆದು, ಸಕಲವ ಕಂಡು ಅರಿದು, ಹೇಳುವುದು,
ಆತ್ಮ ಭಿನ್ನವೋ, ಘಟ ಭಿನ್ನವೋ ?
ಇಷ್ಟಲಿಂಗವೆಂದು, ಪ್ರಾಣಲಿಂಗವೆಂದು ಕಟ್ಟಿ ಹೋರುವಾಗ,
ತಾನು ದೃಷ್ಟದ ಅಂಗವ ಹೊತ್ತು ಹೋರುತ್ತಿದ್ದು,
ಮತ್ತೆ ಕ್ರೀಯಲ್ಲಾವೆಂಬುದಕ್ಕೆ ತೆರಪಾವುದು ?
ಅಲ್ಲ, ಅಹುದೆಂದು ಗೆಲ್ಲ ಸೋಲಕ್ಕೆ ಹೋರುವುದು,
ಕ್ರೀಯೋ, ನಿಃಕ್ರೀಯೋ ?
ಮಂದಿಯ ನಡುವೆ ನಿಂದಿರ್ದ ಉಡುವಿನಂತೆ,
ಕಣ್ಣು ಮುಚ್ಚಿ ಗೆದ್ದೆನೆಂದು ಬಡಿಯಿಸಿಕೊಂಬ ತೆರದ
ಮಾತಿನ ಮಾಲೆ ಬೇಡ.
ನೂಲ ಹಿಡಿದು ಬೆಟ್ಟವನೇರುವಂತೆ,
ಅಧವೆ ಬಾಲನ ಹಿಡಿದು ಬದುಕುವಂತೆ,
ಕೂಷ್ಮಾಂಡವ ಹಿಡಿದು ಎಯ್ದುವ ಜಲದಲ್ಲಿ ಚರಿಸುವನಂತೆ,
ಕಡೆಯಾಗಬೇಡ, ನೆರೆ ನಂಬು.
ಮಾಡುವ ಕ್ರೀಯಲ್ಲಿ ಅರಿವುಹೀನವಾಗಬೇಡ.
ಮಡುವಿನ ನಡುವೆ ಕಟ್ಟಿದ ಹಾಲದ ಹಾದಿಯಂತೆ,
ಅಡಿ ತೊಲಗಿದಡೆ ಕುಡಿವಿರಿ ನೀರ.
ಬಿಡದಿರು ಮಾಡುವ ಸತ್ಕ್ರೀಯ.
ಇದನರಿದು ಒಡಗೂಡು,
ಐಘಟದೂರ ರಾಮೇಶ್ವರಲಿಂಗವ, ಉಭಯ ಭಾವವಳಿದು.