Index   ವಚನ - 8    Search  
 
ಎನ್ನ ಚಿತ್ತಕ್ಕೆ ಆಚಾರಲಿಂಗವಾದಾತ, ಬಸವಣ್ಣ. ಎನ್ನ ಬುದ್ಧಿಗೆ ಗುರುಲಿಂಗವಾದಾತ, ಬಸವಣ್ಣ. ಎನ್ನ ಅಹಂಕಾರಕ್ಕೆ ಶಿವಲಿಂಗವಾದಾತ, ಬಸವಣ್ಣ. ಎನ್ನ ಮನಕ್ಕೆ ಜಂಗಮಲಿಂಗವಾದಾತ, ಬಸವಣ್ಣ. ಎನ್ನ ಜೀವಕ್ಕೆ ಪ್ರಸಾದಲಿಂಗವಾದಾತ, ಬಸವಣ್ಣ. ಎನ್ನ ಅರುವಿಂಗೆ ಮಹಾಲಿಂಗವಾದಾತ, ಬಸವಣ್ಣ. ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ, ಬಸವಣ್ಣ. ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾದಾತ, ಬಸವಣ್ಣ. ಎನ್ನ ಕಾರಣತನುವಿಂಗೆ ತೃಪ್ತಿಲಿಂಗವಾದಾತ, ಬಸವಣ್ಣ. ಇಂತೆಂದರಿದೆನಾಗಿ, ಗವರೇಶ್ವರಲಿಂಗದಲ್ಲಿ ಆನು ಸುಖಿಯಾಗಿರ್ದೆನಯ್ಯಾ.