ಅಗ್ನಿ ವಾಯುವ ಧರಿಸಿ, ವಾಯು ಆಕಾಶವ ಧರಿಸಿ,
ಆಕಾಶ ಅಪ್ಪುವ ಧರಿಸಿ, ಅಪ್ಪು ಪೃಥ್ವಿಯ ಧರಿಸಿ,
ಆ ಪೃಥ್ವಿಗೆ ಅಪ್ಪು, ಆ ಅಪ್ಪುವಿನ ಮಧ್ಯದ ಕಮಠ,
ಕಮಠನ ಮಧ್ಯದ ಶೇಷ, ಶೇಷನ ಮಧ್ಯದ ಜಗ,
ಜಗದ ಆಗುಚೇಗೆಯಲ್ಲಿ ಲೋಲನಾಗದೆ,
ಕಾಯಗುಣವ ಕರ್ಮದಿಂದ ಕಳೆದು, ಜೀವ ಗುಣವ ಅರಿವಿನಿಂದ ಮರೆದು,
ಭಾವ ನಿರ್ಭಾವವಾದಲ್ಲಿ,
ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.