Index   ವಚನ - 81    Search  
 
ಆತ್ಮ ತೇಜದಲ್ಲಿ ಪೂಜಿಸಿಕೊಂಬ ಹಿರಿಯರುಗಳೆಲ್ಲರೂ ಕೆಟ್ಟ ಕೇಡ ನೋಡಾ. ಅಂದಳ ಸತ್ತಿಗೆ ಕರಿ ತುರಗಂಗಳಿಂದ, ನಾನಾ ಭೂಷಣ ಸುಗಂಧ ಸುಖದಿಂದ ಮೆಚ್ಚಿ ಪೂಜಿಸಿಕೊಂಬ ಹಿರಿಯರೆಲ್ಲರೂ ಬೋಧನೆಯ ಹೇಳಿ ಬೋಧಿಸಿಕೊಂಡುಂಬ ಹಿರಿಯರುಗಳೆಲ್ಲರೂ ಹಿರಿಯರಲ್ಲದೆ ಕಿರಿಯರಾದವರಾರೂ ಇಲ್ಲ. ಇದುಕಾರಣ, ಅಂಧಕನ ಕೈಯ ಅಂಧಕ ಹಿಡಿದಂತೆ. ಹೆಣನ ಕಂಡಂಜುವಂಗೆ ರಣದ ಸುದ್ದಿಯೇಕೆ ? ತನುಸುಖವ ಮೆಚ್ಚಿದ, ಗುರು ಮುಟ್ಟಿದ ಭಕ್ತಂಗೆ ನಿಶ್ಚಯ ಹೇಳಲಾಗಿ, ಅವನಿಗಿನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ ?