Index   ವಚನ - 757    Search  
 
ಅನಾದಿಪುರುಷ ಬಸವಣ್ಣಾ, ಕಾಲ ಮಾಯೆಗಳೆರಡೂ ನಿಮ್ಮ ಮುಂದಿರ್ದು, ನಿಮ್ಮ ಕಾಣೆವೆನುತ್ತಿಹವು. ಆದಿಪುರುಷ ಬಸವಣ್ಣಾ; ಸುರಾಸುರರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ನಾದಪುರುಷ ಬಸವಣ್ಣಾ, ನಾದ ಮಂತ್ರಗಳು ಪಂಚಮಹಾವಾದ್ಯಂಗಳು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು. ವೇದಪುರುಷ ಬಸವಣ್ಣಾ, ವೇದಶಾಸ್ತ್ರಾಗಮ ಪುರಾಣಂಗಳು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹವು. ಅಗಮ್ಯಪುರುಷ ಬಸವಣ್ಣಾ, ಅಂಗಾಲ ಕಣ್ಣವರು ಮೈಯೆಲ್ಲ ಕಣ್ಣವರು ನಂದಿವಾಹನರು ಗಂಗೆವಾಳುಕರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ಅಗೋಚರ ಪುರುಷ ಬಸವಣ್ಣಾ, ಈ ಗೋಚರಿಸಿದ ಮನುಮುನಿ ದೇವದಾನವ ಮಾನವರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ಅಪ್ರಮಾಣ ಪುರುಷಾ ಬಸವಣ್ಣ, ಈ ಪ್ರಮಾಣರೆಲ್ಲರು ನಿಮ್ಮ ಮುಂದಿರ್ದು ನಿಮ್ಮ ಕಾಣೆವೆನುತ್ತಿಹರು. ಸರ್ವಜ್ಞ ಪುರುಷ ಬಸವಣ್ಣಾ, ಈ ಸರ್ವರು ನಿಮ್ಮ ಬಳಸಿರ್ದು ನಿಮ್ಮ ಕಾಣೆವೆನುತ್ತಿಹರು. ಇಂತೀ ಸರ್ವ ಪ್ರಕಾರದವರೆಲ್ಲರೂ ಬಸವಣ್ಣಾ ಬಸವಣ್ಣಾ ಎನುತ್ತ ನಿಮ್ಮ ಸಾಧಿಸಿ ಭೇದಿಸಿ ಪೂಜಿಸಿ ತರ್ಕಿಸಿ ಹೊಗಳಿ ಕಾಣದೆ, ನಿಮ್ಮಿಂದವೆ ಉತ್ಪತ್ತಿ ಸ್ಥಿತಿ ಲಯಂಗಳಾಗುತ್ತಿಹರು. ಅದು ಕಾರಣ, ನಮ್ಮ ಗುಹೇಶ್ವರಲಿಂಗದಲ್ಲಿ ಭಕ್ತಿವಡೆದ ಅನಂತ ಭಕ್ತರೆಲ್ಲ ಬಸವಣ್ಣ ಬಸವಣ್ಣ ಬಸವಣ್ಣ ಎನುತ್ತ ಬದುಕಿದರಯ್ಯಾ.