ಎನಗೆ ನೀನಿಂಬಕೊಡುವಲ್ಲಿ ಸಕಲವ ಪ್ರಮಾಣಿಸುವದ ಬಿಟ್ಟು,
ನಿಃಕಲವಸ್ತುವಾಗು.
ಶಕ್ತಿಸಮೇತವ ಬಿಟ್ಟು ನೀ ಶಕ್ತಿ ನಿರ್ಲೇಹವಾಗು.
ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದಬಿಟ್ಟು ನಿಶ್ಚಿಂತನಾಗು.
ಅಂದು ಮಿಕ್ಕಾದ ಭಕ್ತರ ಗುಣವ ನೋಡೆಹೆನೆಂದು ಕೊಟ್ಟ ಠಕ್ಕುಠವಾಳವ ಬಿಡು.
ಸರ್ವರಾಗ ವಿರಾಗನಾಗಿ, ಸರ್ವಗುಣಸಂಪನ್ನನಾಗಿ,
ಜ್ಞಾನಸಿಂಧು ಸಂಪೂರ್ಣನಾಗಿ,
ನಿನ್ನ ಅರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ.
ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೋಡಿಹೆ,
ಇದಕ್ಕೆ ಗನ್ನಬೇಡ ಚೆನ್ನ, ನಿಃಕಳಂಕ ಮಲ್ಲಿಕಾರ್ಜುನಾ.