Index   ವಚನ - 163    Search  
 
ಎನ್ನ ಚಿತ್ತಕ್ಕೆ ನಕಾರವಾದನಯ್ಯಾ ಬಸವಣ್ಣನು. ಎನ್ನ ಬುದ್ಧಿಗೆ ಮಕಾರವಾದನಯ್ಯಾ ಬಸವಣ್ಣನು. ಎನ್ನ ಅಹಂಕಾರಕ್ಕೆ ಶಿಕಾರವಾದನಯ್ಯಾ ಬಸವಣ್ಣನು. ಎನ್ನ ಮನಕ್ಕೆ ವಕಾರವಾದನಯ್ಯಾ ಬಸವಣ್ಣನು. ಎನ್ನ ಜ್ಞಾನಕ್ಕೆ ಯಕಾರವಾದನಯ್ಯಾ ಬಸವಣ್ಣನು. ಎನ್ನ ಮತಿಗೆ ಓಂಕಾರವಾದನಯ್ಯಾ ಬಸವಣ್ಣನು. ಎನ್ನ ನಾದಕ್ಕೆ ಆಕಾರವಾದನಯ್ಯಾ ಬಸವಣ್ಣನು. ಎನ್ನ ಬಿಂದುವಿಗೆ ಉಕಾರವಾದನಯ್ಯಾ ಬಸವಣ್ಣನು. ಎನ್ನ ಕಳೆಗೆ ಮಕಾರವಾದನಯ್ಯಾ ಬಸವಣ್ಣನು. ಎನ್ನ ಭವವ ಕೊಂದೆಹೆನೆಂದು ಬಕಾರವಾದನಯ್ಯಾ ಬಸವಣ್ಣನು. ಎನ್ನ ಸಕಲಾಸೆಯ ಕೊಂದೆಹೆನೆಂದು ಸಕಾರವಾದನಯ್ಯಾ ಬಸವಣ್ಣನು. ಎನ್ನ ವಿಕಾರವ ಕೊಂದೆಹೆನೆಂದು ವಕಾರವಾದನಯ್ಯಾ ಬಸವಣ್ಣನು. ಎನ್ನ ಭಕ್ತಿಗೆ ಬಕಾರವಾದನಯ್ಯಾ ಬಸವಣ್ಣನು. ಎನ್ನ ಶಕ್ತಿಗೆ ಸಕಾರವಾದನಯ್ಯಾ ಬಸವಣ್ಣನು. ಎನ್ನ ವಚಸ್ಸಿಂಗೆ ವಕಾರವಾದನಯ್ಯಾ ಬಸವಣ್ಣನು. ಇಂತಪ್ಪ ಮಹಾಪ್ರಣಮಂಗಳೇ ಬಸವಣ್ಣನಾಗಿ, ಬಸವಣ್ಣನೇ ಮಹಾಪ್ರಣಮಂಗಳಾಗಿ, ತಮ್ಮ ಮಠಕ್ಕೆ ತಾವೇ ಬಂದು, ಭಕ್ತಿ ವಸ್ತುವನಿತ್ತಡೆ, ನಾನದ ನಿಃಕಳಂಕ ಮಲ್ಲಿಕಾರ್ಜುನನ ಶರಣರಿಗಿತ್ತು ಸುಖಿಯಾದೆನು.