ಒಂದು ಬಾಲೆ ಕಂದನ ಹೊತ್ತು ಬಂದಿತ್ತು.
ಕಂದ ಹುಟ್ಟಿ, ಎಡದ ಕೈಯಲ್ಲಿ ಗಡಿಗೆ, ಬಲದ ಕೈಯಲ್ಲಿ ಕಟ್ಟಿಗೆ.
ಮಂಡೆಯ ಮೇಲೆ ಕಿಚ್ಚುಸಹಿತವಾಗಿ ಅಟ್ಟುಂಬುದಕ್ಕೆ ನೆಲಹೊಲನ ಕಾಣದೆ,
ತಿಟ್ಟನೆ ತಿರುಗಿ, ಗಟ್ಟದ ಒತ್ತಿನಲ್ಲಿ, ಕಟ್ಟಕಡೆಯಲ್ಲಿ,
ಒಂದು ಬಟ್ಟಬಯಲು ಮಾಳವಿದ್ದಿತ್ತು.
ಕೈಯ ಕಂದನನಿರಿಸಿ ಕಟ್ಟಿಗೆಯ ಹೊರೆಯ ಕಟ್ಟ ಬಿಟ್ಟು,
ಮಸ್ತಕದ ಬೆಂಕಿಯ ಕಟ್ಟಿಗೆಯ ಒತ್ತಿನಲ್ಲಿರಿಸಿ,
ಒತ್ತಿನ ಕಾಲ ಕಾಣದೆ ಹೊಲಬುದಪ್ಪಿ, ಆ ಹೊಲದೊಳಗೆ ತಿರುಗಿನೋಡಿ,
ಪಶ್ಚಿಮದಲ್ಲಿ ಕಂಡ ಪಚ್ಚೆಯ ಕಲ್ಲ, ಉತ್ತರದಲ್ಲಿ ಕಂಡ ಪುಷ್ಕರದ ಕಲ್ಲ,
ಪೂರ್ವದಲ್ಲಿ ಕಂಡ ಬಿಳಿಯಕಲ್ಲ ಮೂರೂ ಕೂಡಿ,
ಮಡಕೆಯ ಮಂಡೆಯ ಮೇಲಿರಿಸಲಾಗಿ, ಕಂಡಿತ್ತು ಕಲ್ಲಿನ ಇರವ.
ಉದಕವನರಸಿ ಅ[ಳಲು] ತ್ತಿರ್ದಿತ್ತು [ಬೆಂಕಿ.ಆ] ಬೆಂಕಿ ಬೇಗೆಗಾರದೆ,
ಉದಕ ಒಡೆದು ಮಡಕೆ ನಿಂದಿತ್ತು.
ನಿಂದ ಮಡಕೆಯ ಅಂಗವ ಕಂಡು, ಇದರ ಹಂಗೇನೆಂದು ಕೈ ಬಿಡಲಾಗಿ,
ಮಡಕೆಯಡಗಿತ್ತು ಮೂರುಕಲ್ಲಿನ ಮಧ್ಯದಲ್ಲಿ
ಕಟ್ಟಿಗೆ ಸುಟ್ಟವನ ಮಕ್ಕಳುಂಡರು ಮಿಕ್ಕವರೆಲ್ಲಾ ಹಸಿದರು.
ಹಸಿದವರ ಸಂಗ ಗಸಣೆಗೊಳಿಸಿತ್ತು.
ಇಂತೀ ಹುಸಿಯ ದೇಹವ ತೊಟ್ಟು ದೆಸೆಗೆಟ್ಟೆನಯ್ಯಾ,
ನಿಃಕಳಂಕಮಲ್ಲಿಕಾರ್ಜುನಾ.