Index   ವಚನ - 225    Search  
 
ಕಲ್ಲದೇವರೆಂದು ನಂಬಿ ಪೂಜಿಸಿದವರೆಲ್ಲರೂ ಕಲಿಯುಗದ ಕತ್ತೆಗಳಾಗಿ ಸಿಲ್ಕಿ, ಕೆಟ್ಟಳಿದು ಹೋದರು ನೋಡಾ. ಮಣ್ಣುದೇವರೆಂದು ನಂಬಿ ಪೂಜೆಯ ಮಾಡಿದವರೆಲ್ಲರೂ ಮುಕ್ತಿಪಥ ಕಾಣದೆ ಕೆಟ್ಟು, ಶುನಿಸೂಕರಾದಿಗಳಾಗಿ ಕೆಟ್ಟುಹೋದರು ನೋಡಾ. ಎಲ್ಲ ದೇವರಿಗೆ ಮಸ್ತಕಪೂಜೆ. ನಮ್ಮ ಶಿವಭಕ್ತರ ಕರಮನಭಾವದೊಳು ಪೂಜೆಗೊಂಬುವ ಶ್ರೀಗುರುಲಿಂಗಜಂಗಮಕ್ಕೆ ಉಂಗುಷ್ಟಪೂಜೆ ನೋಡಾ. ಇಕ್ಕಿದಡೆ ಉಂಬುವದು, ಒಡನೆ ಮಾತನಾಡುವದು. ಅನೇಕ ಬುದ್ಧಿಯ ಪೇಳ್ವುದು. ಇಂಥ ಪರಮ ದೈವವನುಳಿದು, ಭೂತ ಪ್ರೇತ ಪಿಶಾಚಿಗೆ ಅನ್ನವನಿಕ್ಕಿ, ನಿಧಾನವ ಪಡೆವೆನೆಂಬ ಭವಭಾರಿಗೆ ನಾಯಕ [ನರಕ], ಮಹಾಪಾತಕ ತಪ್ಪದು ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ.