Index   ವಚನ - 322    Search  
 
ಗುರುಶಿಷ್ಯ ಸಂಬಂಧ, ಕಮಠನ ಶಿಶುವಿನ ಕೂರ್ಮೆಯಂತಿರಬೇಕು. ಗುರುಶಿಷ್ಯ ಸಂಬಂಧ, ಬಿತ್ತಳಿದ ಕಾರ್ಪಾಸದ ಪಾವಕನ ಸಂಗದಂತಿರಬೇಕು. ಗುರುಶಿಷ್ಯ ಸಂಬಂಧ, ಪಯದ ಅಪ್ಪುವಿನ ಸಂಗದಂತಿರಬೇಕು. ಗುರುಶಿಷ್ಯ ಸಂಬಂಧ, ಲೆಕ್ಕಣಿಕೆಯೊಳಡಗಿದ ಸುರೇಖೆಯಂತಿರಬೇಕು. ಹೀಂಗಲ್ಲದೆ ಹಸ್ತಮಸ್ತಕಸಂಯೋಗವ ಮಾಡಿದ ಗುರುವಿನ ಇರವು. ಒಡೆದ ಗಡಿಗೆಯಲ್ಲಿ ಸುಧೆಯ ತುಂಬಿ ಅದಿರಬೇಕೆಂದಡೆ, ಪಡಿಗೆ ತೆರಹಿಲ್ಲ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ.