Index   ವಚನ - 777    Search  
 
ಅಯ್ಯಾ! ಕಾರ್ಯನಲ್ಲ ಕಾರಣನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ಭೇದಕನಲ್ಲ ಸಾಧಕನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ಪಾತಕನಲ್ಲ ಸೂತಕನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ದ್ವೈತನಲ್ಲ ಅದ್ವೈತನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ಕಾಟಕನಲ್ಲ ಕೀಟಕನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ಎನ್ನವನಲ್ಲ ನಿನ್ನವನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ಸಂಕಲ್ಪನಲ್ಲ ವಿಕಲ್ಪನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ಒಮ್ಮೆ ಆಚಾರದವನಲ್ಲ ಒಮ್ಮೆ ಅನಾಚಾರದವನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ಕುಂಟಣಿಯಲ್ಲ ನೆಂಟಣಿಯಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ದುಶ್ಶೀಲನಲ್ಲ ದುರ್ಮಾರ್ಗಿಯಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ಜಾತಿಯವನಲ್ಲ ಅಜಾತಿಯವನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ಇಂದು ಉಭಯವಳಿದು ಬೆಳಗುವ ಸಂಗನ ಬಸವಣ್ಣನ ಉನ್ಮನಾಗ್ರದಲಿ ಹೊಳೆವಾತ ತಾನೆ ನೋಡ! ಗುಹೇಶ್ವರಲಿಂಗವು ಚೆನ್ನಬಸವಣ್ಣ.