ವಚನ - 779     
 
ಅಯ್ಯಾ! ಗಮನಿಯಲ್ಲ ನಿರ್ಗಮನಿಯಲ್ಲ ನೋಡಾ! ನಿರವಯ ಶೂನ್ಯಲಿಂಗಮೂರ್ತಿ ಸುಚಿಂತನಲ್ಲ, ದುಶ್ಚಿಂತನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಕುಟಿಲನಲ್ಲ ಕುಹಕನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಬೂಟಕನಲ್ಲ ಚಾಟಕನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ದಿಟದವನಲ್ಲ ಸಟೆಯವನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಸಂಚಲನಲ್ಲ ವಂಚಲನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಪ್ರಪಂಚನಲ್ಲ ಪ್ರಮಾಣನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಗಣಿತನಲ್ಲ ಅಗಣಿತನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಖಂಡಿತನಲ್ಲ ಅಖಂಡಿತನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಚರಿತನಲ್ಲ ಅಚರಿತನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಭರಿತನಲ್ಲ ಸುರಿತನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಚಾಡಿಯಲ್ಲ ಚಿತಾಲನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಗಾರುಡನಲ್ಲ ಕುರೂಪನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಮರುಳನಲ್ಲ ದುರುಳನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಆಶಕನಲ್ಲ ಪಾಶಕನಲ್ಲ ನೋಡಾ! ನಿರವಯಶೂನ್ಯಲಿಂಗಮೂರ್ತಿ. ಇಂತು ಉಭಯವಳಿದುಳಿದು ಸಂಗನ ಬಸವಣ್ಣನ ಅರುವಿನ ಮಧ್ಯದಲಿ ಬೆಳಗುವ ಜ್ಯೋತಿ ತಾನೆ ನೋಡಾ! ಗುಹೇಶ್ವರಲಿಂಗವು ಚೆನ್ನಬಸವಣ್ಣ.