Index   ವಚನ - 780    Search  
 
ಅಯ್ಯಾ! ಆಗಮಿಕನಲ್ಲ ವೇದಪಾಠಕನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ, ತರ್ಕನಲ್ಲ ವ್ಯಾಕರಣನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ, ಶಾಸ್ತ್ರಜ್ಞನಲ್ಲ ಪುರಾಣಿಕನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ, ವಾದಿಯಲ್ಲ ಉಪನೀತಿಯಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ, ಮಾತಿನವನಲ್ಲ ಮಥನದವನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ನೀತಿಯವನಲ್ಲ ಖ್ಯಾತಿಯವನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ, ರತಿಯವನಲ್ಲ ವಿರತಿಯವನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ, ಹೆಣ್ಣು ರೂಪನಲ್ಲ ಗಂಡು ರೂಪನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ, ನಾಮದವನಲ್ಲ ಸೀಮೆಯವನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ, ಆಕ್ರಿಯದವನಲ್ಲ ದುಃಕ್ರಿಯದವನಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ, ಶ್ವಾನ ಜ್ಞಾನಿಯಲ್ಲ ಕುಕ್ಕಟ ಜ್ಞಾನಿಯಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ. ಆಶನಿಯಲ್ಲ ವ್ಯಸನಿಯಲ್ಲ ನೋಡ! ನಿರವಯಶೂನ್ಯಲಿಂಗಮೂರ್ತಿ ಇಂತು ಉಭಯ ಭಿನ್ನನಾಮವಳಿದ ಸಂಗನ ಬಸವಣ್ಣನ ಕರ ನಯನ ಮುಖದಲ್ಲಿ ಬೆಳಗುವ ಚಿಜ್ಯೋತಿ ತಾನೆ ನೋಡ! ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗ ಚೆನ್ನಬಸವಣ್ಣ.