Index   ವಚನ - 347    Search  
 
ಜಂಗಮ ಭಕ್ತಿಯ ಮಾಡಿಹೆನೆಂದು ಮಹಾಮನೆಯ ಕಟ್ಟಿದ ಮತ್ತೆ, ಹಗೆ ಕಪಟವಂ ತಾಳ್ದು, ಶಿವರೂಪಿನಲ್ಲಿ ಬಂದು ಇರಿದಡೆ, ಅಂಗವ ಕೊಡದಿದ್ದಡೆ ಭಕ್ತಂಗದೆ ಭಂಗ. ಕಪಟದಿಂದ ಸತಿಯ ಹಿಡಿದಡೆ, ಗದಕದಲ್ಲಿದ್ದನೆಂದಡೆ, ತನ್ನ ಸತ್ಯಕ್ಕೆ ಭಂಗ. ಆಶೆಯಿಂದ ಬಂದು, ವೇಷವ ತಾಳಿ, ರಾಶಿಯ ಹೊನ್ನ ಬೇಡಿದಡೆ, ಮನದಲ್ಲಿ ಆಶೆದೋರಿದಡೆ, ತಾ ಪೂಜಿಸುವ ಈಶ್ವರಂಗೆ ಭಂಗ. ಇದಿರಾಶೆಯ ಬಿಡದೆ ಮಾಡುವನ ಭಕ್ತಿ, ಕೂಸು ಸತ್ತು ಹೇತದ ನಾತ ಬಿಡದಂತೆ, ಅವರಿಗೇತಕ್ಕೊಲಿವ, ನಿಃಕಳಂಕ ಮಲ್ಲಿಕಾರ್ಜುನಾ.