Index   ವಚನ - 349    Search  
 
ಜಗದಲ್ಲಿ ಪರಿವೇಷ್ಟಿಸುವ ದೈವಜಾತಿಗಳ ಪರಿಪ್ರಕಾರವ ನೋಡಿರೆ. ಬ್ರಹ್ಮಮೂರ್ತಿ ಗುರುವಾದ, ವಿಷ್ಣುಮೂರ್ತಿ ಲಿಂಗವಾದ, ರುದ್ರಮೂರ್ತಿ ಜಂಗಮವಾದ. ಇಂತೀ ಮೂವರು ಬಂದ ಭವವ ನೋಡಾ. ಇಷ್ಟಲಿಂಗವ ಕೊಟ್ಟು ಕಷ್ಟದ್ರವ್ಯಕ್ಕೆ ಕೈಯಾನುವ ಕಾರಣ, ಗುರುಬ್ರಹ್ಮನ ಕಲ್ಪಿತವ ತೊಡೆದುದಿಲ್ಲ. ಲಿಂಗ ಸರ್ವಾಂಗದಲ್ಲಿ ಸಂಬಂಧಿಸಿದ ಮತ್ತೆ, ಕಾಯದಲ್ಲಿ ಮೆಟ್ಟಿಸಿಕೊಂಬ ಕಾರಣ, ವಿಷ್ಣುವಿನ ಸ್ಥಿತಿ ಬಿಟ್ಟುದಿಲ್ಲ. ಜಂಗಮ ರುದ್ರನ ಪಾಶವ ಹೊತ್ತ ಕಾರಣ, ರುದ್ರನ ಲಯಕ್ಕೆ ಹೊರಗಾದುದಿಲ್ಲ. ಇಂತಿವರ ಗುರುವೆನಬಾರದು, ಲಿಂಗವೆನಬಾರದು, ಜಂಗಮವೆನಬಾರದು. ಪೂಜಿಸಿದಲ್ಲಿ ಮುಕ್ತಿಯಲ್ಲದೆ ನಿತ್ಯತ್ವವಿಲ್ಲ. ಸತ್ಯವನರಸಿ ಮಾಡುವ ಭಕ್ತ, ನಿತ್ಯಾನಿತ್ಯವ ವಿಚಾರಿಸಬೇಕು. ಸತ್ತು ಗುರುವೆಂಬುದ, ಚಿತ್ತು ಲಿಂಗವೆಂಬುದ, ಆನಂದ ಜಂಗಮವೆಂಬುದ [ಅರಿದು], ಇಂತೀ ತ್ರೈಮೂರ್ತಿಯಾಗಬೇಕು. ತಾನೆ ಗುರುವಾದಡೆ ಬ್ರಹ್ಮಪಾಶವ ಹರಿಯಬೇಕು. ತಾನೆ ಲಿಂಗವಾದಡೆ ಶಕ್ತಿಪಾಶವ ನಿಶ್ಚೈಸಬೇಕು. ತಾನೆ ಜಂಗಮವಾದಡೆ ರುದ್ರನ ಬಲೆಯ ಹರಿಯಬೇಕು. ಇಂತಿವರೊಳಗಾದವೆಲ್ಲವು ಪ್ರಳಯಕ್ಕೆ ಒಳಗು. ಗುರುವೆಂಬುದು ಬಿಂದು, ಲಿಂಗವೆಂಬುದು ಕಳೆ, ಜಂಗಮವೆಂಬುದು ಕಳಾತೀತ, ಜ್ಞಾನ ಜಂಗಮ. ಆ ವಸ್ತುವಿಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. ಪಾಶಬದ್ಧನಲ್ಲ, ವೇಷಧಾರಿಯಲ್ಲ, ಗ್ರಾಸಕ್ಕೋಸ್ಕರವಾಗಿ ಭಾಷೆಯ ನುಡಿವನಲ್ಲ. ಈಶಲಾಂಛನವ ಹೊತ್ತು, ಕಾಸಿಂಗೆ ಕಾರ್ಪಣ್ಯಬಡುವನಲ್ಲ. ಮಹದಾಶ್ರಯವನಾಶ್ರಯಿಸಿದನಾಗಿ, ಮನೆಯ ತೂತಜ್ಞಾನಿಗಳ ಮೆಚ್ಚ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ನಿರ್ಲೇಪನಾದ ಶರಣ.