ನಾನಾ ಸ್ಥಲಂಗಳ ಮಾತಿನ ಮಾಲೆಯಲ್ಲಿ,
ನಿತ್ಯ ಅನಿತ್ಯವೆಂಬ ಮಾತ ಬಣ್ಣಿಸಿ ನುಡಿವಲ್ಲಿ, ಅದೇತರ ಸ್ಥಲ ?
ಕಾಮದಲ್ಲಿ ಕಂದಿ, ಕ್ರೋಧದಲ್ಲಿ ಬೆಂದು,
ನಾನಾ ಲೋಭ ಮೋಹಂಗಳಲ್ಲಿ ಸಲೆಸಂದು ಸಾವುತ್ತ,
ಭಾವದ ಭ್ರಮೆಯಡಗದೆ, ಜೀವವಿಕಾರ ಹಿಂಗದೆ,
ಕೂರಲಗಿನ ಒಪ್ಪದಂತೆ, ಕಣ್ಣಿಗೆ ನೋಟ, ಘಟ ಅಸುವಿಂಗೆ ಓಟ.
ಆ ಅಸಿಯ ಘಾತಕತನದಂತೆ, ಇವರ ಭಾವಕ್ಕೆ ಭಕ್ತರೆನಲಾರೆ,
ಜ್ಞಾನಕ್ಕೆ ಗುರುವೆನಲಾರೆ, ಸದ್ಭಾವಕ್ಕೆ ಜಂಗಮವೆನಲಾರೆ.
ಎಂದಡೆ ಎನಗದು ಬಂಧನವಲ್ಲ, ಅದು ಕಾಯ ಜೀವದ ಭೇದ.
ಅದು ಸ್ಥಾಣು ರಜ್ಜು, ಎಣ್ಣೆ ಉರಿಯೋಗದ ಕೂಟ.
ಆ ಗುಣ ಒಂದೂ ತೋರದೆ, ಬೆಳಗೆಂಬ ನಾಮವಡಗಿತ್ತು.
ಇಂತೀ ಉಭಯ ಭಿನ್ನವಾದಲ್ಲಿ,
ಎನ್ನ ಮರವೆ ನಿನ್ನ ಕೇಡು, ನಿನ್ನ ಮಲ ಎನ್ನ ಕೇಡು.
ಅದು ದೃಕ್ಕು ಬೊಂಬೆಯಂತೆ,
ನಿಶ್ಚಯವಾದಲ್ಲಿ ನೀನೆ, ನಿಃಕಳಂಕ ಮಲ್ಲಿಕಾರ್ಜುನಾ.