Index   ವಚನ - 450    Search  
 
ನಿರವಯಲಿಂಗ ಲೀಲೆಗೆ ರೂಪಾಯಿತ್ತೆಂದು ನುಡಿವರು, ಬಯಲು ರೂಪಾದ ಪರಿಯಿನ್ನೆಂತೊ ? ಮೊದಲುಗೆಟ್ಟು ಲಾಭನರಸುವ ಪರಿಯಿನ್ನೆಂತೊ ? ರೂಪಿಂಗೆ ಬಂದುದು ನಿರೂಪವಾದ ಮತ್ತೆ ? ರೂಪಿಂಗೆ ಈಡಪ್ಪುದೆ ? ಇದು ಕಾರಣ, ತಮ್ಮಲ್ಲಿರ್ದ ಜ್ಞಾನವ ತಾವರಿಯದೆ, ತಾವು ಹಿಡಿದಿರ್ದ ಲಿಂಗದ ಆದಿ, ಅಳಿ ಉಳಿವ ಉಭಯವ ಭೇದಿಸಲರಿಯದೆ, ಜ್ಞಾನವ ಸಾಧಿಸಲರಿಯದೆ, ಸಾಧ್ಯರೆಂತಾದಿರೊ ? ಆ ಸಾಧ್ಯ, ನಿರುಪಮ ನಿರವಯ ಪರಂಜ್ಯೋತಿ ಲಿಂಗವ ಕುರುಹಿಡುವ ಪರಿಯಿನ್ನೆಂತೊ ? ಕುರುಹಿನ ಮರೆಯೊಳಗಿಪ್ಪ ವಸ್ತುವ ಕಾಬ ತೆರ ಇನ್ನಾವುದೊ ? ಇವೆಲ್ಲವೂ ಮರವೆಯ ಮಾತಲ್ಲದೆ, ಬರಿಯ ಹೋರಟೆಗೆ ಬಲ್ಲವರಲ್ಲವೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.