Index   ವಚನ - 469    Search  
 
ನೇಮವ ಮಾಡುವರೆಲ್ಲರೂ ಬ್ರಹ್ಮಪಾಶಕ್ಕೊಳಗಾದರು. ನಿತ್ಯವ ಮಾಡುವರೆಲ್ಲರು ವಿಷ್ಣುಪಾಶಕ್ಕೊಳಗಾದರು. ಜಪವ ಮಾಡುವರೆಲ್ಲರು ರುದ್ರಪಾಶಕ್ಕೊಳಗಾದರು. ತಪವ ಮಾಡುವರೆಲ್ಲರು ರತಿಪಾಶಕ್ಕೊಳಗಾದರು. ಇಂತಿವು ಮೊದಲಾದ ನಾನಾ ಕೃತ್ಯವ ಮಾಡುವ ಸಂಕಲ್ಪಜೀವಿಗಳೆಲ್ಲರು ನಾನಾ ಯೋನಿಸಂಭವದಲ್ಲಿ ಬರ್ಪುದಕ್ಕೆ ತಮ್ಮ ತಾವೇ ಲಕ್ಷವಿಟ್ಟುಕೊಂಡರು. ಅಲಕ್ಷ ಅತೀತ ಅನಾಮಯ ಅಮಲ ಅದ್ವಂದ್ವ ಕಾಲಭೇದಚ್ಫೇದನಕುಠಾರ ನಾನಾ ಶಾಸ್ತ್ರ ನಿರ್ಲೇಪ ಸಕಲ ಕೃತ್ಯ ಹೇತುದಾವಾನಲ ನಿಃಕಾರಣಮೂರ್ತಿ ಸಹಜಭರಿತಂಗೆ ಹಿಡಿಯಲ್ಲಿಲ್ಲಾಗಿ ಬಿಡಲಿಲ್ಲ, ಅರಿಯಲಿಲ್ಲಾಗಿ ಅರಿದೆನೆಂಬ ತೆರನಿಲ್ಲ. ಮತ್ತೆ ಕುರುಹಿನಿಂದ ಕಂಡ ಅರಿಕೆ ಇನ್ನೇಕೆ ? ಸಿಪ್ಪೆಯ ಕಳೆದು, ಸುಭಿಕ್ಷವ ಸೇವಿಸಿ, ಬಿತ್ತನುಳಿದೆ, ನಿತ್ಯವ ಪರಿದು, ಅನಿತ್ಯವ ಕಳೆದು, ಮತ್ತೇನು ಎನ್ನದಿರ್ಪುದೆ ಲಿಂಗೈಕ್ಯವು, ನಿಃಕಳಂಕ ಮಲ್ಲಿಕಾರ್ಜುನಾ.