Index   ವಚನ - 479    Search  
 
ಪಾದೋದಕ ಪ್ರಸಾದೋದಕ ಲಿಂಗೋದಕಗಳಲ್ಲಿ, ಕೊಂಬ ಕೊಡುವ ಇಂಬಿಡುವ ಭೇದವನರಿಯಬೇಕು. ಪಾದೋದಕವ ಲಿಂಗಕ್ಕೆ ಮಜ್ಜನಕ್ಕೆರೆಯಲಿಲ್ಲ. ಪ್ರಸಾದೋದಕವ ಸೂಸಲಿಲ್ಲ, ಲಿಂಗೋದಕವ ತನ್ನಂಗಕ್ಕೆ ಕೊಳಲಿಲ್ಲ. ಅದೆಂತೆಂದಡೆ: ಪಾದಕ್ಕೂ ಲಿಂಗಕ್ಕೂ ಸಂಬಂಧವಿಲ್ಲವಾಗಿ, ಆ ಪ್ರಸಾದೋದಕಕ್ಕೂ ಆತ್ಮಕ್ಕೂ ಸಂಬಂಧವಿಲ್ಲವಾಗಿ, ಆ ಲಿಂಗೋದಕಕ್ಕೂ ಲಿಂಗಕ್ಕೂ ಸಂಬಂಧವಿಲ್ಲವಾಗಿ. ಇಂತೀ ತ್ರಿವಿಧಂಗಳಲ್ಲಿ ಕೊಡಬಲ್ಲಡೆ, ಕೊಳಬಲ್ಲಡೆ, ಆದಿ ಆಧಾರವನರಿತು, ಅನಾದಿ ಪೂರ್ವಯುಕ್ತವ ತಿಳಿದು, ಗುರುವಾರು ಲಿಂಗವಾರು ಜಂಗಮವಾರೆಂಬುದ ತಿಳಿದು, ಪೂರ್ವ ಉತ್ತರಂಗಳಲ್ಲಿ ನಿಶ್ಚಯಿಸಿ, ಪಾದೋದಕವಾರಿಗೆ, ಪ್ರಸಾದೋದಕವಾರಿಗೆ ಲಿಂಗೋದಕವಾರಿಗೆಂಬುದನರಿತು, ಮರಕ್ಕೆ ನೀರನೆರೆದಲ್ಲಿ ಬೇರಿಗೋ, ಮೇಲಣ ಕೊಂಬಿಗೋ ? ಎಂಬ ಭೇದವ ಕಂಡು, ಗುರುಲಿಂಗಜಂಗಮ ಮೂರೊಂದೆನಬೇಕು. ಹೀಗಲ್ಲದೆ ಕಾಬವರ ಕಂಡು ಏಗೆಯ್ದು ಮಾಡಿದಡೆ, ಅದು ಭವಭಾರಕ್ಕೊಳಗು, ನಿಃಕಳಂಕ ಮಲ್ಲಿಕಾರ್ಜುನಾ.