Index   ವಚನ - 490    Search  
 
ಪೂರ್ವತತ್ವ ಬಿಟ್ಟುದು ಭಕ್ತಸ್ಥಲ, ಮಧ್ಯದ ಭಾವವ ಬಿಟ್ಟುದು ಮಾಹೇಶ್ವರಸ್ಥಲ. ತ್ರಿವಿಧದ ಕೂಟವ ಬಿಟ್ಟುದು ಪ್ರಸಾದಿಸ್ಥಲ. ಗಮನ ನಿರ್ಗಮನವ ಬಿಟ್ಟುದು ಪ್ರಾಣಲಿಂಗಿಸ್ಥಲ. ಶ್ರುತದಲ್ಲಿ ಕೇಳಿ ಕೇಳದಂತೆ, ದೃಷ್ಟದಲ್ಲಿ ಕಂಡು ಕಾಣದಂತೆ, ಅನುಮಾನದಲ್ಲಿ ಅರಿದು ಅರಿಯದಂತೆ ಇದ್ದುದು ಶರಣಸ್ಥಲ. ವಿರಳ ಅವಿರಳವೆಂಬ ಸುಳುಹು ಸೂಕ್ಷ್ಮಂಗಳು ನಿಂದಲ್ಲಿ ಐಕ್ಯಸ್ಥಲ. ಇಂತೀ ಸ್ಥಲಂಗಳಲ್ಲಿ ಸ್ವೀಕರಿಸಿ, ಆರೋಪಿಸಿ, ಪೂರ್ವಕಕ್ಷೆಯ ಕಂಡು, ಮಧ್ಯದ ಕಕ್ಷೆಯಲ್ಲಿ ನಿಂದು, ಉತ್ತರರಕ್ಷೆಯ ಕೂಡಿದಲ್ಲಿ, ಆರುಸ್ಥಲದ ಸೋಂಕಿಲ್ಲ, ಮೂರುಸ್ಥಲದ ಮುಟ್ಟಿಲ್ಲ. ಬೇರೊಂದು ಸ್ಥಲವೆಂದು ಲಕ್ಷಿಸುವುದಕ್ಕೆ ಗೊತ್ತಿಲ್ಲ ಅದು ಉರಿಯ ಬುಡ ತುದಿಯಂತೆ ಕತ್ತುವುದು ಪೂರ್ವವಾಗಿ, ಮೇಲೆ ಹತ್ತಿ ಉರಿವುದು ಉತ್ತರವಾಗಿ, ಆ ಉಭಯದ ಗೊತ್ತು ನಿಂದಲ್ಲಿ, ಸ್ಥಲ ನಿಃಸ್ಥಲವಾಯಿತ್ತು. ನಿಃಕಳಂಕ ಮಲ್ಲಿಕಾರ್ಜುನ ದೃಷ್ಟಕ್ಕೆ ಗೋಚರವಾದನು.