Index   ವಚನ - 526    Search  
 
ಬಸವಣ್ಣ ಮೊದಲಾದ ಮಹಾಭಕ್ತರೆಲ್ಲರೂ ಕಂಡರಯ್ಯಾ. ಮಹಾ ಕೈಲಾಸವೆಂಬ ಬೆಳ್ಳಿಯ ಬೆಟ್ಟವನೇರಿ, ಒಳ್ಳೆಯ ಪದದಲ್ಲಿ ತಲ್ಲೀಯರಾದಿಹೆವೆಂದು, ಬಲ್ಲತನವ ಮಚ್ಚಿ ಇರಲಾಗಿ, ಆ ಬೆಳ್ಳಿಯ ಬೆಟ್ಟ ಕಲ್ಲೋಲವಾಗಲಾಗಿ, ಅಲ್ಲಿರ್ದವರನೆಲ್ಲಿಯೂ ಕಾಣೆ. ಇವರಿಗಿನ್ನೆಲ್ಲಿಯ ಮುಕ್ತಿ ? ಜಲ್ಲೆಯನಡರ್ದು ಎಲ್ಲೆಯ ಪಾಯಿಸುವನಂತೆ, ಇವರೆಲ್ಲರೂ ಬಲ್ಲಹರೆ, ಬಲ್ಲಹ ಚೆನ್ನಬಸವಣ್ಣನಲ್ಲದೆ ? ಇವರೆಲ್ಲರನೊಲ್ಲೆನೆಂದೆ, ಬಲ್ಲರ ಬಲ್ಲಹನೆ ನಿಃಕಳಂಕ ಮಲ್ಲಿಕಾರ್ಜುನಾ.