Index   ವಚನ - 576    Search  
 
ಭಕ್ತಿಯಂ ಮಾಡಿ ವಸ್ತುವಂ ಕಾಣಬೇಕೆಂಬರು ಕರ್ಮಕಾಂಡಿಗಳು. ಭಕ್ತಿಯಿಲ್ಲದೆ ಚಿತ್ತದ ಗೊತ್ತನರಿಯಬೇಕೆಂಬರು ಆಧ್ಯಾತ್ಮಭಾವಕಾಂಡಿಗಳು. ದರ್ಪಣದಲ್ಲಿಪ್ಪ ಒಪ್ಪದ ಭೇದವ, ಅದರ ಇಷ್ಟವಿಲ್ಲದೆ ದೃಷ್ಟವ ಕಾಬ ಪರಿಯಿನ್ನೆಂತೊ ? ಮುಕುರದ ಅಂಗವಿದ್ದು, ಪ್ರಕೃತಿತನು ಮುಸುಕಿದಲ್ಲಿ, ಮುಖದ ಸುಖದ ಸುಖನೆಲೆಯ ವಿಚಾರಿಸಬಹುದೆ ? ಸಕಲವೆಂದಡೆ ಇಷ್ಟ, ನಿಷ್ಕಲವೆಂದಡೆ ಅದರ ಅಭೀಷ್ಟ, ಈ ಉಭಯದ ತಟ್ಟಿಗಾರದೆ, ಹೊತ್ತು ಹೋರುವರ ಮಾತಿನ ಕತ್ತಿಯ ಬಾಯಿಧಾರೆಯ ಗಾಯಕ್ಕೆ, ಇನ್ನೇತರ ಮದ್ದೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.