Index   ವಚನ - 614    Search  
 
ಮಣ್ಣು ನೀರಿನಂತೆ ಆದಾಗವೆ ಭಕ್ತನ ಭಕ್ತಸ್ಥಲ. ಬಂಗಾರ ಬಣ್ಣ ಆದಂತೆ ಮಹೇಶ್ವರನ ಮಾಹೇಶ್ವರಸ್ಥಲ. ಅನಲ ಅನಿಲನಂತಾದಾಗವೆ ಪ್ರಸಾದಿಯ ಪ್ರಸಾದಿಸ್ಥಲ. ದೀಪವೊಂದರಲ್ಲಿ ಉದಯಿಸಿ ಪ್ರತಿಜ್ಯೋತಿ ಪ್ರಮಾಣಿಸಿದಾಗವೆ, ಪ್ರಾಣಲಿಂಗಿಯ ಪ್ರಾಣಲಿಂಗಿಸ್ಥಲ. ಶ್ರುತವ ಕೇಳಿ, ದೃಷ್ಟಾದೃಷ್ಟವ ಕಂಡು, ಅನುಮಾನ ಅನುಮಾನವನರಿದು, ಸುಮ್ಮಾನ ತಲೆದೋರದಿದ್ದಾಗವೆ, ಶರಣನ ಶರಣಸ್ಥಲ. ವಾರಿ ಶಿಲೆಯ[ಂತೆ] ಮಣಿಯ ದಾರದಂತೆ, ಬುದ್ಬುದ[ದ] ನೀರಿನ[ಂತೆ] ಮಣಿಯ ವಜ್ರದ ಬಂಧದಂತೆ, ಮರೀಚಿಕಾಜಲವ ತುಂಬಿ ತಂದ ಕುಂಭದಂತೆ, ಸಾಕಾರವಳಿದು ನಿರಾಕಾರ ಉಳಿದಲ್ಲಿ ಐಕ್ಯನ ಐಕ್ಯಸ್ಥಲ. ಇಂತೀ ತ್ರಿವಿಧ ಭಕ್ತಸ್ಥಲ. ಇಂತೀ ತ್ರಿವಿಧ ಮಾಹೇಶ್ವರಸ್ಥಲ. ಇಂತೀ ತ್ರಿವಿಧ ಪ್ರಸಾದಿಸ್ಥಲ, ಇಂತೀ ತ್ರಿವಿಧ ಪ್ರಾಣಲಿಂಗಿಸ್ಥಲ, ಇಂತೀ ತ್ರಿವಿಧ ಶರಣಸ್ಥಲ, ಇಂತೀ ತ್ರಿವಿಧ ಐಕ್ಯಸ್ಥಲ. ಇಂತೀ ಷಟ್ಸ್ಥಲ, ದ್ವಾದಶಂಗಳಾಗಿ ಕೂಡುವಲ್ಲಿ ತ್ರಯೋದಶಭಾವವಾಯಿತ್ತು. ಉಭಯವನೇಕೀಕರಿಸುವಲ್ಲಿ ಒಂದೊಡಲಾದುದಾಗಿ, ರೂಪು ರೂಪಿನಲ್ಲಿದ್ದು ನಿರೂಪನ ಕೂಡಬೇಕೆಂಬ ಕೂಟ. ತ್ರಿವಿಧದ ಆಟವಾಯಿತ್ತು. ಗುರುವಿಂಗೂ ಗುರುವುಂಟೆಂಬ ಭಾವ. ಲಿಂಗಕ್ಕೆ ಆಶ್ರಯವುಂಟೆಂಬುದೊಂದು ವಾಸ. ಜಂಗಮಕ್ಕೂ ರುದ್ರನ ಪಾಶವ ಕೂಡಬೇಕೆಂಬುದೊಂದು ಆಸೆ. ಇಂತೀ ಮೂರರ ಮೂರು ಈರಾರರ ಭಂಡ, ಇಪ್ಪತ್ತೈದರ ಅಗ್ಗದಲ್ಲಿ ಕೊಂಡು, ದಶಹತ್ತರಲ್ಲಿ [ಮಾರಿ] ಒಂದೇ ಲಾಭವಾಯಿತ್ತು. ಆ ಲಾಭವ ಮೊದಲಿನಲ್ಲಿ ಸರ್ವಭಕ್ತಿ ಸಂಪೂರ್ಣನಾಗಿ, ಭಕ್ತಿಯನರಿವುದಕ್ಕೆ ಬಸವಣ್ಣನಾಗಿ, ನಿತ್ಯಾನಿತ್ಯವನರಿವುದಕ್ಕೆ ಚೆನ್ನಬಸವಣ್ಣನಾಗಿ, ಆಕಾರ ನಿರಾಕಾರಗಳಲ್ಲಿ ಭಕ್ತಿ ವಿರಕ್ತಿಯ ತಾಳ್ದ ಚೇತನಮೂರ್ತಿಗಳಲ್ಲಿ ಅವಿರಳನಾಗಿ, ನಿಜವನೆಯ್ದಿದ ಪ್ರಭುದೇವರು ಮುಂತಾದ ಸಕಲ ಪ್ರಮಥರ ಪ್ರಸಾದವೇ ಎನಗೆ ಷಟ್ಸ್ಥಲ. ಇಂತಿವರೊಳಗಾದ ಏಕೋತ್ತರಶತಸ್ಥಲ ಮೊದಲಾದ ಭಾವವೂ ನಿಮ್ಮಲ್ಲಿಯೆಂದು ಅರಿದ ಮತ್ತೆ ಅದನೇನೆಂದುಪಮಿಸುವೆ ? ಅದು ಭಾವವಿಲ್ಲದ ಬಯಲು, ನಾಮವಿಲ್ಲದ ನಿರ್ಲೇಪ, ನಿಜ ನೀನೆ ಎನ್ನುತ್ತಿದ್ದೆ, ನಿಃಕಳಂಕ ಮಲ್ಲಿಕಾರ್ಜುನಾ.