ರಸ ಆತ್ಮನಂಗ, ಗಂಧ ವಾಯುವಿನಂಗ, ರೂಪು ಭಾವದಂಗ,
ಶಬ್ದ ಆಕಾಶದಂಗ, ಸ್ಪರ್ಶ ಪೃಥ್ವಿಯಂಗವಾಗಿ ಅಂಗೀಕರಿಸುವಲ್ಲಿ,
ಪಂಚೇಂದ್ರಿಯಮುಖಂಗಳಿಂದ ಅರ್ಪಿಸಿಕೊಂಬವನಾರು ಹೇಳಾ.
ಅದು ಸ್ಥಾಣು ಚೋರನಂತೆ, ರಜ್ಜು ಸರ್ಪನಂತೆ,
ತಿಳಿದು ನೋಡಲಿಕೆ ಮತ್ತಲ್ಲಿ ಏನೂ ಇಲ್ಲ.
ತನ್ನರಿದು ಮುಟ್ಟುವಲ್ಲಿ ತಾನು ತಾನೆ.
ತನ್ನನರಿಯದೆ ಮುಟ್ಟುವಲ್ಲಿ, ಇಂದ್ರಿಯಂಗಳು ಅನ್ಯಭಿನ್ನವಾಗಿಹವು.
ಅನ್ಯವಿಲ್ಲದೆ ಚೆನ್ನಾಗಿ ತಿಳಿದು ನೋಡಲಾಗಿ,
ಅಭಿನ್ನಮೂರ್ತಿ ನಿಃಕಳಂಕ ಮಲ್ಲಿಕಾರ್ಜುನ, ತಾನು ತಾನೆ.