Index   ವಚನ - 670    Search  
 
ರುದ್ರನ ದೇವೆರೆಂದು ಆರಾಧಿಸಿ, ಶಿಲೆಯೊಳಗೆ ಹೋರಟೆಗೊಂಡು, ಕೆಟ್ಟರಲ್ಲಾ ಭಕ್ತಜನಂಗಳು. ವಿಷ್ಣುವ ದೇವರೆಂದು ಆರಾಧಿಸಿ, ಮರನ ಸುತ್ತಿ ಕಾಲುಗೆಟ್ಟರಲ್ಲಾ ಭೂಸುರಾದಿಗಳು. ಬ್ರಹ್ಮನ ದೇವರೆಂದು ಆರಾಧಿಸಿ, ಬೆಂಕಿಯಲ್ಲಿ ಬೆಂದಿರಲ್ಲಾ ಮರ್ತ್ಯಲೋಕದ ಮಹಾಜನಂಗಳು. ಇಂತೀ ಮೂವರು ಗಂಪಧಾರಿಗಳೆಂಬೆ ಧರೆಯೊಳಗೆ. ಹೇರಿನ ಅಕ್ಕಿ, ಲಳಿಗೆಯ ಎಣ್ಣೆ, ಹೂವು ಕಾಯಿ ಹಣ್ಣು ಮೊದಲಾದವನು, ತಪ್ಪ ಸಾಧಿಸಿ ತರಿಸಿಕೊಂಡುಂಬ ಚಿಕ್ಕಮಕ್ಕಳಿಗೆಲ್ಲಿಯದೊ ನೆಟ್ಟನೆಯ ದೇವತ್ವ ? ಎನ್ನ ದೇವಂಗೆ ಇಂತಿವರಂಗ ಒಂದೂ ಇಲ್ಲ. ಕಾಲದೊಳಗಾದ ಪ್ರಳಯವಿರಹಿತ, ಕರ್ಮದೊಳಗಾದ ಚತುರ್ವಿಧ ರಹಿತ, ಗಂಗೆವಾಳುಕಸಮಾರುದ್ರರೊಳಗಾದ ಬಂಧನವಿರಹಿತ. ಲೀಲೆಗೆ ಹೊರಗಾದ ಸ್ವಯಂಭುವಯ್ಯಾ ಎನ್ನ ದೇವ. ಇಂತಿವರೆಲ್ಲರೂ ಪ್ರತಿಷ್ಠೆಯನಾರಾಧಿಸಿ ಪ್ರಸನ್ನರಾದರಯ್ಯಾ. ಇಂತೀ ಪುಣ್ಯದ ಫಲ ಎನಗೊಂದೂ ಬೇಡ. ಇದ್ದವರೆಲ್ಲ ಒಳಗಿರಲಿ, ನಾ ಹೊರಗಯ್ಯಾ. ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಅಲಸಿದೆನಲಸಿದೆ, ನಿಮ್ಮ ಕಾಷ್ಠದ ಸೇವೆಯನಯ್ಯಾ. ಕಾಷ್ಠದವನ ಕಾಷ್ಠವ ಮಾಡದೆ, ಎನ್ನ ಹೊರಗಿರಿಸಿ ನಿನ್ನೊಳಗಾದ, ನಿಃಕಳಂಕ ಮಲ್ಲಿಕಾರ್ಜುನಾ.