ಲಿಂಗ ಬಿದ್ದರೆ ಸಮಾಧಿಯ ಕೊಂಡೆನೆಂಬಿರಿ.
ಗುರು ಸತ್ತರೇಕೆ ಸಮಾಧಿಯ ಕೊಳ್ಳರಣ್ಣಾ.
ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ.
ಪೃಥ್ವಿಯಲ್ಲಿ ಹುಟ್ಟಿದ ಕಣಿಯನೆ ತಂದು, ಅಷ್ಟತನುವಿನ ಕೈಯಲ್ಲಿ ಕೊಡಲು,
ಇದ ಮುಟ್ಟಿ ಪೂಜಿಸಲಿಕ್ಕೆ, ನಾ ಹೇಗೆ ಪೂಜಿಸಲಯ್ಯಾ ?
ಲಿಂಗ ಮೂವರಿಗೆ ಹುಟ್ಟಿತ್ತು.
ಪೃಥ್ವಿಯಲ್ಲಿ ಶಿಲೆಯಾಯಿತ್ತು, ಬಿನ್ನಾಣದ ಕೈಯಲ್ಲಿ ರೂಪಾಯಿತ್ತು,
ಗುರುವಿನ ಕೈಯಲ್ಲಿ ಮೋಕ್ಷವಾಯಿತ್ತು.
ಈ ಲಿಂಗ ಬೀಳಬಲ್ಲುದೆ ? ಪೃಥ್ವಿ ತಾಳಬಲ್ಲುದೆ ?
ಲಿಂಗ ಬಿದ್ದೀತೆಂದು ಷೋಡಶೋಪಚಾರವ ಮಾಡಲಾಗದು.
ಲಿಂಗದ ಕೂಡ ಸಮಾಧಿಯ ಕೊಂಡೆನೆಂತೆಂಬ ಭಕ್ತರಿಗೆ
ನಾಯಕನರಕ ತಪ್ಪದೆಂದ, ನಿಃಕಳಂಕ ಮಲ್ಲಿಕಾರ್ಜುನ.