Index   ವಚನ - 711    Search  
 
ವ್ರತನೇಮ ನಿತ್ಯಕೃತ್ಯವ ಮಾಡುವ ಸತ್ಯರುಗಳು ಕೇಳಿರೋ. ಲಿಂಗಕ್ಕೆ ಜಂಗಮ ವಿಶೇಷವೆಂದು, ಆ ಜಂಗಮದ ಪಾದೋದಕದಲ್ಲಿ ಮಜ್ಜನಂಗೆಯ್ದು, ಪ್ರಸಾದದಿಂದ ಸಮರ್ಪಣವ ಮಾಡಿ, ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಲಿಂಗ ಪ್ರಾಣ ಜಂಗಮವೆಂದು ಮಾಡಿ, ಮತ್ತಾ ಜಂಗಮ ಮನೆಗೆ ಬಂದಡೆ ಸಂದೇಹವ ಮಾಡಲೇಕೆ? ತನ್ನ ಪ್ರಾಣ ಲಿಂಗವೆಂದರಿದು, ಲಿಂಗದ ಪ್ರಾಣ ಜಂಗಮವೆಂದರಿದು, ಉಭಯಪ್ರಾಣ ತತ್ಪ್ರಾಣವಾದ ಮತ್ತೆ, ಭಕ್ತಿಗೆ ಅವಿಶ್ವಾಸವಾಗಲೇಕೆ ? ಆ ಜಂಗಮ ಹೆಣ್ಣ ಬೇಡಿದಡೆ ಆಶಕನೆಂದು, ಮಣ್ಣ ಬೇಡಿದಡೆ ಬದ್ಧಕನೆಂದು, ಹೊನ್ನ ಬೇಡಿದಡೆ ಸಂಸಾರಿಯೆಂದು ಇಷ್ಟನೆಂದ ಮತ್ತೆ, ಭಕ್ತಿಯ ವಾಸಿಗೆ ಹೋರಲೇಕೆ ? ಎಷ್ಟು ಕಾಲ ಮಾಡಿದ ದ್ರವ್ಯ ಸವೆದಡೆ, ಭಕ್ತಿಗೆ ಸಲ್ಲ, ಮುಕ್ತಿ ಇಲ್ಲ. ವಿಶ್ವಾಸಹೀನಂಗೆ ಸತ್ಯಭಕ್ತಿ ಹುಸಿಯೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.