Index   ವಚನ - 714    Search  
 
ಶಬ್ದ ಸ್ಪರ್ಶ ರೂಪು ರಸ ಗಂಧಂಗಳೆಂಬ ಪಂಚೇಂದ್ರಿಯಂಗಳಲ್ಲಿ ಲಿಂಗಾರ್ಪಿತವ ಮಾಡಬೇಕೆಂಬ ಭಂಗಿತರ ನೋಡಾ. ಅಂಗುಷ್ಠದಲ್ಲಿ ಸರ್ಪದಷ್ಟವಾದಡೆ, ಸರ್ವಾಂಗಲಿಂಗಿಗೆ ಬೇರೆ ಐದುಸ್ಥಾನದಲ್ಲಿ ಅರ್ಪಿತವ ಮಾಡಬೇಕೆಂಬ ಜಡಸಂಕಲ್ಪವಿಲ್ಲ. ಇಷ್ಟಕ್ಕೂ ಭಾವಕ್ಕೂ ಪ್ರಾಣಕ್ಕೂ ಕಟ್ಟಿದ ಈಡ ನೋಡಯ್ಯಾ. ಪರುಷದ ರಸ ಕೈಯಲ್ಲಿರ್ದು ಹೇಮವನರಸಿ ತಿರುಗುವವನಂತೆ, ಖೇಚರತ್ವದಲ್ಲಿ ಹೋಹ ಸಾಮರ್ಥ್ಯವಿರ್ದು, ಅಂಬಿಗನ ಹಂಗನರಸುವ ಅವಿಚಾರಿಯಂತೆ, ನಿತ್ಯತೃಪ್ತನಾಗಿರ್ದು ಅಂಬಲಿಯ ಬಯಸುವ ಕಾಳ್ವಿಚಾರಿಯಂತೆ, ಸ್ವಯಂಜ್ಯೋತಿ ಪ್ರಕಾಶದೊಳಗಿರ್ದು, ಜ್ಯೋತಿಯ ಹಂಗಿನಲ್ಲಿ ಕಂಡೆಹೆನೆಂಬ ಭ್ರಾಂತನಂತೆ, ವಾಯುಗಮನವುಳ್ಳಾತ ತೇಜಿಯನರಸುವಂತೆ, ಅಮೃತ ಸೇವನೆಯ ಮಾಡುವಾತ ಆಕಳನರಸಿ ಬಳಲುವಂತೆ, ತಾ ಬೈಚಿಟ್ಟ ನಿಕ್ಷೇಪವ ಹೊಲಬುದಪ್ಪಿ ಅರಸುವನಂತೆ ಆಗಬೇಡ. ಇದು ಕಾರಣ, ವೇದಗುಣದಲ್ಲಿ ಅರ್ಪಿತವೆಂಬ, ಮೂರರ ಗುಣದಲ್ಲಿ ತೃಪ್ತಿಯೆಂಬ, ಆರರ ಗುಣದಲ್ಲಿ ಆಧಾರವೆಂಬ, ಎಂಟರ ಗುಣದಲ್ಲಿ ಸಂತೋಷವೆಂಬ ಭ್ರಾಂತು ಹರಿದು, ಬೆಳಗಿನೊಳಗಿಪ್ಪ ಜ್ವಲಿತವಂ ಕಡಿದು, ತಾನು ತಾನಾಗಬಲ್ಲಡೆ, ಆತನೆ ನಿರ್ಮುಕ್ತ, ನಿಃಕಳಂಕ ಮಲ್ಲಿಕಾರ್ಜುನಾ.