ವಚನ - 816     
 
ಅಯ್ಯಾ! ಸ್ಥೂಲದೇಹದ ಸುಖದಲ್ಲಿ ಹೊದ್ದಿದವರು ಸೂಕರನ ಹಾಂಗೆ. ಸೂಕ್ಷ್ಮದೇಹದ [ಸುಖ]ದಲ್ಲಿ ಹೊದ್ದಿದವರು ಮದಗಜದಂತೆ. ಕಾರಣ ದೇಹದ ಸುಖದಲ್ಲಿ ಹೊದ್ದಿದವರು ರಾಜಹಂಸನ ಹಾಂಗೆ. ಅದೆಂತೆಂದಡೆ: ಸ್ಥೂಲದೇಹವೆಂದಡೆ ಸಪ್ತಧಾತುಯುಕ್ತವಾದ ಪಂಚವಿಂಶತಿತತ್ತ್ವ ಸ್ವರೂಪು, ಆ ದೇಹಕ್ಕೆ ಬಿಂದು ಮಾತ್ರ ಸುಖ ಪರ್ವತದಷ್ಟು ದುಃಖ ನೋಡಾ. ಸೂಕ್ಷ್ಮದೇಹವೆಂದಡೆ: ಪಂಚರಸಾಮೃತಸ್ವರೂಪವಾದ ಕರಣಂಗಳು. ಆ ದೇಹಕ್ಕೆ ಬಿಂದು ಮಾತ್ರ ದುಃಖವು, ಪರ್ವತದಷ್ಟು ಸುಖ ನೋಡಾ. ದಶವಿಧತತ್ತ್ವಸ್ವರೂಪವಾದ ಕಾರಣದೇಹವೆಂದಡೆ: ಅನಂತನಾದಸ್ವರೂಪವಾದ ಏಕತತ್ತ್ವವನ್ನುಳ್ಳ ಆತ್ಮನೆ ಕಾರಣದೇಹ, [ಅದು] ದಿವ್ಯ ಸುಧಾರಸಾಮೃತಸ್ವರೂಪವಾದ ಮಹಾಸದ್ಗಂಧದ ಪರಿಮಳದಂತಿಪ್ಪುದು ನೋಡಾ. ಆ ದೇಹಕ್ಕೆ ಅಣುಮಾತ್ರ ದುಃಖವಿಲ್ಲದ ಸುಖವುಂಟು ನೋಡಾ, ಲಿಂಗಸಂಗಿಯಾದ ಕಾರಣ. ಇಂತಪ್ಪ ಲಿಂಗಸಂಗದಿಂದ ಅಖಂಡಸುಖಿ ತಾನಾಗಬೇಕಾದಡೆ ಪಿಂಡಾದಿ ಜ್ಞಾನಶೂನ್ಯಾಂತಮಾದ ನೂರೊಂದು ಸ್ಥಳ-ಕುಳವ ಕರತಳಾಮಳಕವಾಗಿ ತಿಳಿದು, ಮೇಲಾದ ಜ್ಞಾನಶೂನ್ಯಸ್ಥಲದಲ್ಲಿ ನಿಂದು, ಪಿಂಡಾದಿ ಜ್ಞಾನ ಗುರುಕರುಣ ಸ್ಥಲಂಗಳೆಂಬ ಮಾರ್ಗವು ತಪ್ಪದೆ, ನಡೆ-ನುಡಿ ಸಂಪನ್ನರಾಗಿ ನಿಜಾಚರಣೆಯಲ್ಲಿ ನಿಂದು, ಅರು ವೈರಿ ಅಷ್ಟಮದ [ಸಪ್ತ]ವ್ಯಸನವೆಂಬ ಮಾಯಾಪಾಶಪರ್ವತಕ್ಕೆ ವಜ್ರಾಯುಧವಾಗಿ ನಿಂದರು ನೋಡಾ ನಮ್ಮ ಶರಣಗಣಂಗಳು. ಇಂತು-ಕಾರಣಸ್ವರೂಪವಾದ ಚಿದ್ಘನಲಿಂಗ ನಡೆ-ನುಡಿ-ಸ್ಥಳ-ಕುಳದನುಭಾವ ಸುಖವ ಪಡೆಯದ ಶೈವ ಜಡಕರ್ಮಿಗಳೆಲ್ಲ, ಅರುವೈರಿ ಅಷ್ಟಮದ ಸಪ್ತವ್ಯಸನವೆಂಬ ಮಾಯಾಪಾಶ ಕಾಲ ಕಾಮರ ಬಾಧೆಗೊಳಗಾಗಿ ಗುಹೇಶ್ವರಲಿಂಗದ ಶರಣರ ಮಾರ್ಗವನರಿಯದೆ [ಕೆಟ್ಟರು]. ಕೆಟ್ಟಿತೀ ಲೋಕ ನೋಡಾ ಸಿದ್ಧರಾಮಯ್ಯಾ.