Index   ವಚನ - 752    Search  
 
ಸೀರೆಯ ನೆಯ್ವನ ಕೈಯ, ಲಾಳಿ ನುಂಗಿತ್ತ ಕಂಡೆ, ಜಾಲಗಾರನ ಬಲೆಯ, ತೃಷಾಳಿ ನುಂಗಿತ್ತ ಕಂಡೆ. ಭಾಳಾಂಬಕನ ತಲೆಯ, ಚೇಳು ನುಂಗಿತ್ತ ಕಂಡೆ. ಇವರನಳವಡಿಸುವಾತನ ಕೈಯ, ಒಂದೆ ಬಾಳೆಯ ಸುಳಿ ನುಂಗಿತ್ತ ಕಂಡೆ. ಬಾಳೆಯ ಸುಳಿ ತಿರುಗುವನ್ನಕ್ಕ ಇರ್ದು ನೋಡಿ ಕೊಯ್ದು, ಆ ಎಲೆಯ ಹಾಸಿ, ಆದಿಯ ಶರಣರೆಲ್ಲರು ಓಗರವನುಂಡರು. ಭೇದಿಸಲರಿಯದೆ ನಾದಬಿಂದುಕಳಾಭಾವ ನೆಲೆಗೊಳ್ಳದಾದರು. ತ್ರಿಸಂಧ್ಯಾಕಾಲದ ಭಜನೆವಂತರಿವರು, ಪುರಾಣದ ಪುಣ್ಯವಂತರು, ಶಾಸ್ತ್ರದ ಸನ್ನಹಿತರು, ವಚನದ ರಚನೆವಂತರು, ಮುಕ್ತಿಯ ಬಟ್ಟೆಯ ಸತ್ಯವಂತರು. ಇವರೆಲ್ಲರು ಸತ್ತ ಸಾವ ಕಂಡು, ನನಗಿನ್ನೆತ್ತಣ ಮುಕ್ತಿಯೋ, ನಿಃಕಳಂಕ ಮಲ್ಲಿಕಾರ್ಜುನಾ?