Index   ವಚನ - 781    Search  
 
ಹಾಳಾಹಳವೆಂಬ ಮಾಳಿಗೆಯ ಹೊಕ್ಕು, ಕೋಳಾಹಳ ತಾ ಕಾದಿ, ಇಡಾ ಪಿಂಗಳ ಸುಷುಮ್ನ ನಾಡಿಗಳೆಂಬ ಅಂಬುಗಂಡಿಯ ಮುಚ್ಚಿ, ಅಷ್ಟಮದವೆಂಬ ಕೋಟೆಯನೊಡೆದು, ಪಂಚೇಂದ್ರಿಯವೆಂಬ ಹೂಡೆಯವಂ ಕಿತ್ತು, ಸಕಳೇಂದ್ರಿಯವೆಂಬ ನಿಗಳಂ ಮುರಿದು, ಅಹಂಕಾರವೆಂಬ ಅಗಳಂ ಹೂಣಿ, ಉಂಟಿಲ್ಲವೆಂಬ ಚಾರುಗದಪಂ ಕಿತ್ತು, ಸತ್ವರಜವೆಂಬ ನಿಲವಂ ಕಡಿದು, ತಮವೆಂಬ ಅಗುಳಿಯಂ ಮುರಿದು, ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯೆಂಬ ನೆಲಗಟ್ಟಂ ಮೆಟ್ಟಿ, ಸ್ಥೂಲಸೂಕ್ಷ್ಮ ಕಾರಣವೆಂಬ ಮೇಲುಜಂತಿಯಂ ಕಿತ್ತು, ಪ್ರಪಂಚೆಂಬ ಮೇಲು ಮಣ್ಣಂ ತೆಗೆದುಹಾಕಿ, ಹೋಯಿತ್ತು ಮಾಳಿಗೆ, ನಾಮ ನಷ್ಟವಾಗಿ. ಮಾಳಿಗೆಯನಾಳಿದವ ಬಾಳದೆ ಹೋದ, ನಿಃಕಳಂಕ ಮಲ್ಲಿಕಾರ್ಜುನಾ.