Index   ವಚನ - 793    Search  
 
ಹುತ್ತದಲ್ಲಿ ಕೈಯನಿಕ್ಕಿ ಸರ್ಪನ ತೆಗೆವಾಗ, ಸರ್ಪನ ಒಪ್ಪತಪ್ಪಿ, ಮತ್ತೆ ವಸ್ತುವಿನ ನೇವಳ ಆಭರಣವಹಲ್ಲಿ, ಅದಾರ ದೃಷ್ಟ ? ಮತ್ತೆ ನಿರ್ಧನಿಕ ವಿಶ್ವಾಸದಿಂದ ಬಸವಣ್ಣ ಮುಂತಾದ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ ಕೃತ್ಯ ತಪ್ಪದೆ ಇಕ್ಕುವಾಗ ಅದಾರ ವಿಶ್ವಾಸ ಹೇಳಾ ? ನಾ ಹೊತ್ತ ಕಟ್ಟಿಗೆಯ ಸರಬು ಮತ್ತೆ ಸುವರ್ಣದಂಡವಾದಾಗ ಆದಾರ ನಿಶ್ಚಯದ ವಿಶ್ವಾಸ ? ಅವು ತಮ್ಮ ಚಿತ್ತದ ದೃಢತೆಯಿಂದ ಗುರುವಿಂಗೆ ತನುವೆಂದಲ್ಲಿ, ಕಂಡಲ್ಲಿಯೆ ಆತ್ಮತೇಜವಳಿದು ಹೊಡೆಗೆಡೆಯಬೇಕು. ಲಿಂಗಕ್ಕೆ ಮನ ಮುಟ್ಟಿ ಪೂಜೆಯ ಮಾಡುವಲ್ಲಿ, ರಾಜ ಚೋರ ಅನಲ ಅಹಿ ಮುಂತಾದ ಭಯಂಗಳಿಗೆ ತಲೆದೋರದಿರಬೇಕು. ಜಂಗಮಾರ್ಚನೆಯ ಮಾಡುವಲ್ಲಿ, ಅರ್ಥ ಪ್ರಾಣ ಅಪಮಾನಕ್ಕೆ ಕಟ್ಟುಮೆಟ್ಟದಿರಬೇಕು. ಇಂತೀ ತ್ರಿವಿಧ ವಿಶ್ವಾಸ ಭಕ್ತಂಗೆ ಮೂರುಸ್ಥಲ ಮುಂತಾಗಿ, ಆರುಸ್ಥಲವೊಳಗಾಗಿ ನೂರೊಂದುಸ್ಥಲ ವೇಧಿಸಿ ನಿಂದಲ್ಲಿ, ಅದು ಒಂದೆ ವಿಶ್ವಾಸದ ಒಡಲು. ಇದಕ್ಕೆ ಹಲವು ಮಾತನಾಡಿ, ನಾನಾಸ್ಥಲ ಉಂಟೆಂದು ಹಲಬುತ್ತಿರಲಿಲ್ಲ. ಇದು ನೆಲೆ, ವಸ್ತುವಿನ ಏಕಸ್ಥಲ, ನಿಃಕಳಂಕ ಮಲ್ಲಿಕಾರ್ಜುನಾ.