ಹೊಲೆಯ ಕುಲಜನಾದುದ ಕಂಡೆ,
ಗುರು ಶಿಷ್ಯಂಗೆ ಶಿಷ್ಯನಾದುದ ಕಂಡೆ.
ಪೂಜಿಸುವ ತಮ್ಮಡಿ ಲಿಂಗವಾದುದ ಕಂಡೆ.
ಅರಸು ಬಂಟನ ಕೆಳಗೆ ಹರಿದಾಡುವುದ ಕಂಡೆ.
ಗಂಡನ ಮುಂದೆ ಹೆಂಡತಿ ಮತ್ತೊಬ್ಬನ ಸಂಗ ಮಾಡುವುದ ಕಂಡೆ.
ಇಂತಿವೆಲ್ಲವನೂ ನಿಂದು ನೋಡುತ್ತಿರಲಾಗಿ,
ನೀರು ಬೆಂಕಿಯ ಸುಟ್ಟು ಮರದೊಳಗಡಗಿತ್ತು.
ಆ ಮರದ ತೆಪ್ಪದಲ್ಲಿ ಈ ಧರೆಯರು ಹೋಗಿ,
ಆಚೆಯ ಧರೆಯ ಬೆವಹಾರವ ತಂದು,
ಮತ್ತೆ ಈಚೆಯಲ್ಲಿ ಕಡನ ಕೊಡಲಾಗಿ,
ಕೊಂಡವ ಸತ್ತ, ಕೊಟ್ಟವ ಕೆಟ್ಟ.
ಆ ಭಂಡ ಎಲ್ಲಿ ಹೋಯಿತ್ತೆಂದರಿಯೆ.
ಆ ಬೆಂಬಳಿಯ ಬಲ್ಲಡೆ, ಐಕ್ಯಾನುಭಾವಿ,
ನಿಃಕಳಂಕ ಮಲ್ಲಿಕಾರ್ಜುನಾ.