Index   ವಚನ - 1    Search  
 
ನಿರಾಕುಳನೆಂಬ ಗಣೇಶ್ವರನ ಶಿಷ್ಯ ನಿರ್ಭೇದ್ಯನೆಂಬ ಗಣೇಶ್ವರ. ನಿರ್ಭೇದ್ಯನೆಂಬ ಗಣೇಶ್ವರನ ಶಿಷ್ಯ ನಿರ್ಮಳ ನಿಜೈಕ್ಯನೆಂಬ ಗಣೇಶ್ವರ. ನಿರ್ಮಳ ನಿಜೈಕ್ಯನೆಂಬ ಗಣೇಶ್ವರನ ಶಿಷ್ಯ ನಿರ್ಭಾವ ನಿಃಪುರುಷ ನಿರಂಜನನೆಂಬ ಗಣೇಶ್ವರ. ನಿರ್ಭಾವ ನಿಃಪುರುಷ ನಿರಂಜನನೆಂಬ ಗಣೇಶ್ವರನ ಶಿಷ್ಯ ನಿರಾಕಾರ ನಿರಾವರಣನೆಂಬ ಗಣೇಶ್ವರ. ನಿರಾಕಾರ ನಿರಾವರಣನೆಂಬ ಗಣೇಶ್ವರನ ಶಿಷ್ಯ ನಿರುಪಮನೆಂಬ ಗಣೇಶ್ವರ. ನಿರುಪಮನೆಂಬ ಗಣೇಶ್ವರನ ಶಿಷ್ಯ ನಿರ್ಗುಣ ನಿರಾಧಾರ ನಿರಾಲಂಬನೆಂಬ ಗಣೇಶ್ವರ. ನಿರ್ಗುಣ ನಿರಾಧಾರ ನಿರಾಲಂಬನೆಂಬ ಗಣೇಶ್ವರನ ಶಿಷ್ಯ ಸರ್ವಾಧಾರ ಸದಾಶಿವನೆಂಬ ಗಣೇಶ್ವರ. ಸರ್ವಾಧಾರ ಸದಾಶಿವನೆಂಬ ಗಣೇಶ್ವರರ ಸ್ವರೂಪರಾದಂಥ ಆದಿನಾಥೇಶ್ವರದೇವರು. ಆದಿನಾಥೇಶ್ವರದೇವರ ಶಿಷ್ಯರು ಸತ್ಯೇಶ್ವರದೇವರು. ಸತ್ಯೇಶ್ವರದೇವರ ಶಿಷ್ಯರು ಘಟಯಂತ್ರದೇವರು. ಘಟಯಂತ್ರದೇವರ ಶಿಷ್ಯರು ಭೃಕುಟೇಶ್ವರದೇವರು. ಭೃಕುಟೇಶ್ವರದೇವರ ಶಿಷ್ಯರು ವಿಶ್ವೇಶ್ವರದೇವರು. ವಿಶ್ವೇಶ್ವರದೇವರ ಶಿಷ್ಯರು ಮುಕ್ತೇಶ್ವರದೇವರು. ಮುಕ್ತೇಶ್ವರದೇವರ ಶಿಷ್ಯರು ಬ್ರಹ್ಮೇಶ್ವರದೇವರು. ಬ್ರಹ್ಮೇಶ್ವರದೇವರ ಶಿಷ್ಯರು ಶಿವದೇವಯ್ಯನವರು. ಶಿವದೇವಯ್ಯನವರ ಶಿಷ್ಯರು ಶಿವಜ್ಞಾನೇಶ್ವರದೇವರು. ಶಿವಜ್ಞಾನೇಶ್ವರದೇವರ ಶಿಷ್ಯರು ಓಂಕಾರದೇವರು. ಓಂಕಾರದೇವರ ಶಿಷ್ಯರು ಸೋಮಲಿಂಗದೇವರು. ಸೋಮಲಿಂಗದೇವರ ಶಿಷ್ಯರು ಸಂಗಮೇಶ್ವರದೇವರು. ಸಂಗಮೇಶ್ವರದೇವರ ಕರಕಮಲದಲ್ಲಿ ಉತ್ಪತ್ಯವಾದ ಶಿಶುವು ಕಾಡಸಿದ್ಧ ನಾನಯ್ಯ. ಹಾಂಗೆಂದು ಅನಾದಿವಿಡಿದು ಬಂದ ಗುರುಶಿಷ್ಯಸಂಬಂಧ, ಹಾಂಗೆ ಅನಾದಿವಿಡಿದು ಬಂದ ಲಿಂಗ, ಅನಾದಿವಿಡಿದು ಬಂದ ಜಂಗಮ, ಅನಾದಿವಿಡಿದು ಬಂದ ಪಾದೋದಕ-ಪ್ರಸಾದ, ಅನಾದಿವಿಡಿದು ಬಂದ ವಿಭೂತಿ-ರುದ್ರಾಕ್ಷಿ-ಮಂತ್ರ, ಅನಾದಿವಿಡಿದು ಬಂದ ಭಕ್ತಿ-ಜ್ಞಾನ-ವೈರಾಗ್ಯ. ಅನಾದಿವಿಡಿದು ಬಂದ ವೀರಶೈವಷಟ್‍ಸ್ಥಲದ ಆಚಾರವು. ಕಾಡನೊಳಗಾದ ಶಂಕರಪ್ರಿಯ ಚೆನ್ನಕದಂಬಲಿಂಗ ನಿರ್ಮಾಯಪ್ರಭುವೆ.