Index   ವಚನ - 42    Search  
 
ಸಕಲ ಲೋಕಾದಿಲೋಕಂಗಳು ಉದಯ, ಮಧ್ಯಾಹ್ನ, ಸಾಯಂಕಾಲ ಪರಿಯಂತರವು ಒಡಲೋಪಾಧಿಯ ಚಿಂತೆಯಿಂದ ತಾಪತ್ರಯಾಗ್ನಿಯಲ್ಲಿ ಬೇಯುತ್ತಿರ್ಪರು ನೋಡಾ. ಅದೆಂತೆಂದೊಡೆ: ಉದಯಕಾಲಕ್ಕೆ ಹೋರಾಟದ ಚಿಂತೆ, ಮಧ್ಯಾಹ್ನಕಾಲಕ್ಕೆ ಅಶನದ ಚಿಂತೆ, ಸಾಯಂಕಾಲಕ್ಕೆ ವ್ಯಸನದ ಚಿಂತೆ, ಇಂತೀ ತ್ರಿವಿಧ ವ್ಯಸನದಲ್ಲಿ ಮನಮಗ್ನವಾದ ಪ್ರಾಣಿಗಳಿಗೆ ಶಿವಜ್ಞಾನವೆಲ್ಲಿಯದಯ್ಯಾ? ಇಂದಿನ ಚಿಂತೆಯ ಮಾಡುವರೆಲ್ಲ ಹಂದಿಗಳು. ನಾಳಿನ ಚಿಂತೆಯ ಮಾಡುವರೆಲ್ಲ ನಾಯಿಗಳು. ಅದೆಂತೆಂದೊಡೆ: ನೀ ಹುಟ್ಟದ ಮುನ್ನವೆ ತಾಯಿಗರ್ಭದಲ್ಲಿ ನವಮಾಸ ಪರಿಯಂತರವು ನಿನಗೆ ಆಹಾರವ ಕೊಟ್ಟವರಾರು ಹೇಳಾ ಮರುಳೆ? ಅಖಂಡತಂಡ ಶಿಲೆಯೊಳಗಿನ ಮಂಡೂಕಕ್ಕೆ ಆಹಾರವ ಕೊಟ್ಟು ಸಲಹಿದವರಾರು ಹೇಳಾ ಮರುಳೆ? ಕಟ್ಟಿಗಿಯೊಳಗಿನ ಭೃಂಗಕ್ಕೆ ಮೊಲೆಗಳ ಕೊಟ್ಟು ಸಲಹಿದವರಾರು ಹೇಳಾ ಮರುಳೆ? ಇರುವೆ ಮೊದಲು ಆನೆ ಕಡೆ ಎಂಬತ್ತು ನಾಲ್ಕುಲಕ್ಷ ಜೀವರಾಶಿಯ ಗರ್ಭದಲ್ಲಿ ಹುಟ್ಟಿ ಹುಟ್ಟಿ ಬರುವಲ್ಲಿ ನಿನಗೆ ಆಹಾರವ ಕೊಟ್ಟು ರಕ್ಷಣವ ಮಾಡಿದವರಾರು ಹೇಳಾ ಮರುಳೆ? ಇಂತೀ ಸರ್ವಲೋಕಾದಿಲೋಕಂಗಳಿಗೆ ಶಿವನೇ ಕರ್ತನೆಂದು ತಿಳಿದು ನೋಡಾ ಮರುಳೆ! ಇಂತಪ್ಪ ಯುಕ್ತಿವಿಚಾರದ ಸುಜ್ಞಾನವಿಲ್ಲದೆ ಬರಿಯ ಒಡಲ ಚಿಂತೆಯಲ್ಲಿ ಹೊತ್ತುಗಳೆದು ಸತ್ತು ಹೋಗುವ ಹೇಸಿ ಮೂಳರ ಕಂಡು ನಾಚಿದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.