Index   ವಚನ - 52    Search  
 
ಎನಗೊಂದು ವ್ಯಾಧಿ ಹತ್ತಿ ಗೊಲ್ಲನ ಧ್ವನಿಮಾಡಲು, ಆ ಗೊಲ್ಲನು ಮೆಲ್ಲಮೆಲ್ಲನೆ ಬಂದು ತನ್ನ ಜೋಳಿಗೆಯೊಳಗಣ ನವಗುಳಿಗೆಯ ತೆಗೆದು, ಎಂಟು ದಿಕ್ಕಿಗೆ ಎಂಟು ಗುಳಿಗೆಯನೊಗೆದು, ಮಧ್ಯದಲ್ಲಿ ಒಂದು ಗುಳಿಗೆಯನಿಟ್ಟು, ತಣ್ಣೀರು ಕುಡಿಯಬೇಡ, ತಂಗಳನ್ನವನುಣ್ಣಬೇಡ, ಮಜ್ಜಿಗೆಯ ಕುಡಿಯಬೇಡ, ಎಮ್ಮಿಯ ಹಾಲ ಸೇವಿಬೇಡ, ಇಂತೀ ಎಲ್ಲವನು ವಿಸರ್ಜಿಸಿ, ಬಿಸಿನೀರು ಕುಡಿದು, ಬಿಸಿ ಅನ್ನವನುಂಡು, ಬಿಳಿ ಆವಿನ ಹಾಲು ಸೇವಿಸಿ, ಪಥ್ಯವ ಮಾಡೆಂದು ಗೊಲ್ಲನು ಪೇಳಿದನು. ಇಂತೀ ಕ್ರಮದಲ್ಲಿ ಪಥ್ಯವ ಮಾಡಿದವರಿಗೆ ರೋಗಾದಿಗಳ ಬಾಧೆ ಪಲಾಯನವಾಗುವದು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.