Index   ವಚನ - 57    Search  
 
ಲಿಂಗಧಾರಣದ ನಿರ್ಣಯವ ಪೇಳ್ವೆ. ಅದೆಂತೆಂದಡೆ: ಸುಜ್ಞಾನೋದಯವಾಗಿ ಸಕಲಪ್ರಪಂಚವ ನಿವೃತ್ತಿಯಮಾಡಿ, ಶ್ರೀಗುರುಕಾರುಣ್ಯವ ಪಡೆದು, ಅಂಗದ ಮೇಲೆ ಲಿಂಗಧಾರಣವಾದ ಶಿವಶರಣನು, ಷಟ್‍ಸ್ಥಾನದಲ್ಲಿ ಲಿಂಗವ ಧರಿಸುತ್ತಿರ್ದ. ಅದೆಂತೆಂದಡೆ: ಕರಸ್ಥಲವೆಂಬ ಪೃಥ್ವಿತತ್ವದಲ್ಲಿ ಆಚಾರಲಿಂಗಸ್ವಾಯತವಮಾಡಿ, ಕಕ್ಷೆಯೆಂಬ ಅಪ್ಪುತತ್ವದಲ್ಲಿ ಗುರುಲಿಂಗಸ್ವಾಯತವಮಾಡಿ, ಹೃದಯವೆಂಬ ತೇಜತತ್ವದಲ್ಲಿ ಶಿವಲಿಂಗಸ್ವಾಯತವಮಾಡಿ, ಕಂಠವೆಂಬ ವಾಯುತತ್ವದಲ್ಲಿ ಜಂಗಮಲಿಂಗಸ್ವಾಯತವಮಾಡಿ, ಉತ್ತಮಾಂಗವೆಂಬಾಕಾಶತತ್ವದಲ್ಲಿ ಪ್ರಸಾದಲಿಂಗಸ್ವಾಯತವಮಾಡಿ, ಅಮಳೋಕ್ಯವೆಂಬ ಆತ್ಮತತ್ವದಲ್ಲಿ ಮಹಾಲಿಂಗಸ್ವಾಯತವಮಾಡಿ, ಇದಲ್ಲದೆ, ಅಪಾದಮಸ್ತಕ ಪರಿಯಂತರ ಸರ್ವಾಂಗಲಿಂಗಮಯವಾಗಿ, ಆವಾವೇಷವ ಧರಿಸದೆ ಲೌಕಿಕಾತ್ಮರಲ್ಲಿ ಹತ್ತರೊಳಗೆ ಹನ್ನೊಂದು ಎಂಬ ಹಾಗೆ ಸರ್ವರಲ್ಲಿಯೂ ಶಿವಶರಣನು ಅವರಂತೆ ಇರ್ಪನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.