Index   ವಚನ - 68    Search  
 
ಇಂತಪ್ಪ ಶ್ರೀ ವಿಭೂತಿಯ ಧರಿಸಲರಿಯದೆ ಮಣ್ಣು ಮಟ್ಟಿಯ ಧರಿಸಿ ಭವಭಾರಕ್ಕೆ ಒಳಗಾದರು ವಿಪ್ರ ಮೊದಲು ಶ್ವಪಚ ಕಡೆಯಾಗಿ ನೋಡಾ. ಇಂತಪ್ಪ ಶ್ರೀ ವಿಭೂತಿಯ ಧರಿಸಲರಿಯದೆ ದೇವ-ದಾನವ-ಮಾನವರು ಮೊದಲಾದ ಸಕಲ ಲೋಕಾದಿಲೋಕಂಗಳು ಭವಕ್ಕೆ ಭಾಜನವಾದರು ನೋಡಾ. ಶ್ರೀ ವಿಭೂತಿಯ ಧರಿಸಲರಿಯದೆ ಗರುಡ ಗಂಧರ್ವ ಕಿನ್ನರ ಕಿಂಪುರುಷರು ಮೊದಲಾದ ಸಕಲ ಮನುಮುನಿಜನಂಗಳು ಋಷಿಗಳು ಭವಕ್ಕೆ ಗುರಿಯಾದರು ನೋಡಾ. ಶ್ರೀ ವಿಭೂತಿಯ ಧರಿಸಲರಿಯದೆ ಅಂಗಾಲಕಣ್ಣವರು ಮೈಯೆಲ್ಲಕಣ್ಣವರು ಒಂದುತಲೆಯವರು ಎರಡುತಲೆಯವರು ಮೂರುತಲೆಯವರು ನಾಲ್ಕುತಲೆಯವರು ಐದುತಲೆಯವರು ಆರುತಲೆಯವರು ಏಳುತಲೆಯವರು ಎಂಟುತಲೆಯವರು ಒಂಬತ್ತು ತಲೆಯವರು ಹತ್ತುತಲೆಯವರು ಹನ್ನೊಂದುತಲೆಯವರು ನೂರುತಲೆಯವರು ಐದುನೂರುತಲೆಯವರು ಸಾವಿರತಲೆಯವರು ಗಂಗೆಗೌರಿವಲ್ಲಭರು ಸಮಾರುದ್ರರು ನಂದಿವಾಹನರು ಇಂತಪ್ಪವರೆಲ್ಲ ಆದಿಪ್ರಮಥರು ಇವರು ಎತ್ತಲಾನುಕಾಲಕ್ಕೆ ಭವಕ್ಕೆ ಬರುವರು ನೋಡಾ. ಮತ್ತಂ, ಇಂತಪ್ಪ ಶ್ರೀ ವಿಭೂತಿಯನು ಬಸವಾದಿ ಪ್ರಭುದೇವರಾಂತ್ಯಮಾದ ಏಳುನೂರುಯೆಪ್ಪತ್ತು ಪ್ರಮಥಗಣಂಗಳು ಮೂಳ್ಳೂರಲಿಕ್ಕೆ ಇಂಬಿಲ್ಲದೆ ಸರ್ವಾಂಗದಲ್ಲಿ ಧರಿಸಿ ತ್ರೈಲೋಕ ಮೊದಲಾದ ಚತುರ್ದಶಭುವನವ ತಮ್ಮ ಚರಣದಿಂದ ಸ್ವಯವಮಾಡಿ ಪರಶಿವಲಿಂಗದಲ್ಲಿ ಶಿಖಿಕರ್ಪುರ ಸಂಯೋಗದ ಹಾಗೆ ಬೆರೆದು ನಿರ್ವಯಲಾದರು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.