Index   ವಚನ - 73    Search  
 
ಇಂತಪ್ಪ ರುದ್ರಾಕ್ಷಿಯನು ಧರಿಸಿದ ಚೇರಮರಾಯಂಗೆ ಮೋಕ್ಷವಾಯಿತ್ತು. ಈ ರುದ್ರಾಕ್ಷಿಯಿಂದ ಮಹಾದೇವಿಯಕ್ಕಗಳಿಗೆ ಆರೂಢಪದವಾಯಿತ್ತು. ಈ ರುದ್ರಾಕ್ಷಿಯಿಂದ ಸೌಂದರನಂಬೆಣ್ಣಗಳಿಗೆ ನಿಜಲಿಂಗೈಕ್ಯಪದವಾಯಿತ್ತು. ಇಂತಿವರು ಮೊದಲಾಗಿ ಸಕಲಗಣಂಗಳಿಗೆ ರುದ್ರಾಕ್ಷಿಯಿಂದ ಶಿವಪದವಾಯಿತ್ತು. ಇಂತಿದರ ನಿರ್ಣಯವನು ಸ್ವಾನುಭಾವಗುರುಮುಖದಿಂ ತಿಳಿದು ವಿಚಾರಿಸಿಕೊಂಡು ಸರ್ವಾಂಗದಲ್ಲಿ ರುದ್ರಾಕ್ಷಿಯನು ಧರಿಸಿ ರುದ್ರಾಕ್ಷಿಮಯವಾಗಿ ಪರಶಿವಲಿಂಗದಲ್ಲಿ ಬೆರೆಯಬೇಕಲ್ಲದೆ ಇಂತಪ್ಪ ವಿಚಾರವನು ತಿಳಿಯದೆ ರುದ್ರಾಕ್ಷಿಧಾರಕರ ಕಂಡು ನೋಡಿ ಧರಿಸುವರೆಲ್ಲಾ ಹುಲಿಯ ಬಣ್ಣಕ್ಕೆ ನರಿಯು ಮೈಸುಟ್ಟುಕೊಂಡು ಸತ್ತಂತಾಯಿತ್ತು ನೋಡಾ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.