Index   ವಚನ - 75    Search  
 
ಪಂಚಾಕ್ಷರಮಂತ್ರದಿಂದ ಅಜಗಣ್ಣ ತಂದೆಗಳಿಗೆ ಆರೂಢಪದವಾಯಿತು. ಪಂಚಾಕ್ಷರಮಂತ್ರದಿಂದ ಶಿವಜಾತಯ್ಯನ ಶಿಷ್ಯ ಮಂತ್ರಜಾತಯ್ಯ ಮಂತ್ರದಲ್ಲಿ ಬಯಲಾದನು. ಪಂಚಾಕ್ಷರಮಂತ್ರದಿಂದ ಸಾನಂದಮುನಿಗಣೇಶ್ವರನು ಯಮಪುರವ ಹಾಳುಮಾಡಿದ. ಪಂಚಾಕ್ಷರಮಂತ್ರದಿಂದ ವೀರಭದ್ರನು ದಕ್ಷಬ್ರಹ್ಮನ ತಲೆಹೊಡೆದು ಯಜ್ಞವ ಕೆಡಿಸಿದ. ಇಂತಪ್ಪ ಶ್ರುತಿಪ್ರಮಾಣ ವಾಕ್ಯಗಳಿಂದ ಪಂಚಾಕ್ಷರ ಮಹತ್ವವ ಕೇಳಿ ಜೀವಾತ್ಮರು ನೆನೆನೆನೆದು ಭವಕ್ಕೆ ಹೇಳಿದರು. ನಾನು ಪಂಚಾಕ್ಷರವ ನೆನೆನೆನೆದು ಭವಮಾಲೆಯ ಹರಿದು ಮಂತ್ರದಲ್ಲಿ ಲಯವಾದೆನಯ್ಯಾ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.