Index   ವಚನ - 77    Search  
 
ಬಾಲತ್ವದಲ್ಲಿ ತನ್ನ ಮಲಮೂತ್ರದೊಡನೆ ಹೊರಳಾಡಿ, ಯೌವನಪ್ರಾಯದಲ್ಲಿ ಮದಮತ್ಸರದಿಂದ ಹೋರಾಡಿ, ಕಾಮದಲ್ಲಿ ಕರಗಿ, ಕ್ರೋಧದಲ್ಲಿ ಕೊರದು, ಲೋಭ ಮೋಹದಿಂದ ಮಗ್ನರಾಗಿ, ಯೌವನಬಲಗುಂದಿ ಮುಪ್ಪುವರಿದು ಹಲ್ಲು ಬಿದ್ದು, ಕಣ್ಣು ಒಳನಟ್ಟು, ಬೆನ್ನು ಬಾಗಿ, ದಮ್ಮು ಹತ್ತಿ, ಗುರುಗೂರಿ ಗರಹತ್ತಿ, ಸಾಯುವ ಮನುಜರಿಗೆ, ವಿಭೂತಿ ವೀಳ್ಯೆ ಎಂದು ಮಾಡಿ, ಅವನ ಪಣೆಯಲ್ಲಿ ವಿಭೂತಿಯ ಧರಿಸಿ, ಸರ್ವಾಂಗದಲ್ಲಿ ವಿಭೂತಿ ಲೇಪನ ಮಾಡಿ, ಸ್ಥಾನಸ್ಥಾನಂಗಳಲ್ಲಿ ರುದ್ರಾಕ್ಷಿಯ ಧರಿಸಿ, ಅವನ ಮನೆಯಲ್ಲಿ ಶಿವಗಣಂಗಳು ಸಲಿಸಿ, ಅವನ ಮಸ್ತಕದ ಮೇಲೆ ಸಕಲ ಗಣಂಗಳು ತಮ್ಮ ಪಾದವನಿಟ್ಟು ಅವನ ಕೈಯಲ್ಲಿ ವಿಭೂತಿ ರುದ್ರಾಕ್ಷಿ ಬಿಲ್ವಪತ್ರಿ ಸುವರ್ಣ ಮೊದಲಾದ ಕಾಂಚನವ ಭಿಕ್ಷವ ಕೊಂಡು ಅವನು ಸತ್ತುಹೋದ ಮೇಲೆ ಊರ ಹೊರಗಾಗಲಿ, ಊರೊಳಗಾಗಲಿ, ಲಿಂಗಸ್ಥಾಪನೆಯಿದ್ದ ಮಠಮಾನ್ಯದಲ್ಲಿ ಏಳುಪಾದ ನಿಡಿದು, ಏಳುಪಾದ ಉದ್ದ ಭೂಮಿಯ ಒಳಗೆ, ಐದುಪಾದ ಚೌಕು, ಮೂರುಪಾದ ಅಡ್ಡಗಲ, ಮೂರುಪಾದ ಒಳಯಕ್ಕೆ ತ್ರಿಕೋಣೆ. ಇಂತೀ ಕ್ರಮದಲ್ಲಿ ಕ್ರಿಯಾಸಮಾಧಿಯ ಮಾಡಿ, ಸುಣ್ಣ ಕೆಂಪುಮಣ್ಣಿನ ಸಾರಣೆಯ ಮಾಡಿ ರಂಗವಾಲಿಯ ತುಂಬಿ, ತಳಿರುತೋರಣವ ಕಟ್ಟಿ, ಕೋಣಿ ಕೋಣಿ ಸ್ಥಾನಕ್ಕೆ ಓಲೆಯ ಮೇಲೆ ಪ್ರಣಮವಂ ಬರೆದು ಆ ಸಮಾಧಿಯಲ್ಲಿ ಸಂಬಂಧಿಸಿ, ಮತ್ತಂ, ಅವನ ಶವಕ್ಕೆ ಹಾಗೆ ಪ್ರಣಮವಂ ಬರೆದು ಸಂಬಂಧಿಸಿ, ಸಂಚರಿಸಿ ಮೇಲೆ ಮೋಕ್ಷವಾಯಿತು ಎಂಬರಯ್ಯಾ ; ಮೋಕ್ಷವಾಗಲರಿಯದು. ಅದೆಂತೆಂದಡೆ, ಇಂತಿವೆಲ್ಲವು ಹೊರಗಣ ಉಪಚಾರವು. ಈ ಉಪಚಾರದಿಂದ ಕರ್ಮದೋಷಗಳು ಹರಿದು ಪಿಶಾಚಿಯಾಗನು, ಭವ ಹಿಂಗದು. ಇಂತೀ ಕ್ರಮದಲ್ಲಿ, ಅಂತರಂಗದಲ್ಲಿ ಲಿಂಗಾಂಗಕ್ಕೆ ಸ್ವಾನುಭಾವಜ್ಞಾನಸೂತ್ರದಿಂ ಪ್ರಣವಸಂಬಂಧ ಮಾಡಿಕೊಂಡಡೆ ಅದೇ ಕ್ರಿಯಾಸಮಾಧಿ, ಗೋಮುಖಸಮಾಧಿ ಮಹಾನಿಜ ಅಖಂಡ ಚಿದ್ಬಯಲಸಮಾಧಿ. ಇಂತಪ್ಪ ಸಮಾಧಿ ಉಳ್ಳವರಿಗೆ ಭವಬಂಧನ ಹಿಂಗಿ ಮುಂದೆ ಮೋಕ್ಷವಾಗುವದು ನೋಡೆಂದನಯ್ಯ ನಿಮ್ಮ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.